ವಿಜಯಸಾಕ್ಷಿ ಸುದ್ದಿ ಕೊಪ್ಪಳ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಯೂರಿರುವ ನಾನಾ ಕೈಗಾರಿಕಾ ಕಂಪನಿಗಳ ವಾಹನಗಳ ಓಡಾಟದಿಂದ ರಸ್ತೆಗಳು ಹೊಂಡಗಳಂತಾಗಿದ್ದು, ಅನೇಕ ಅಪಘಾತಗಳು ಸಂಭವಿಸಿ ಸುಮಾರು ಏಳೆಂಟು ಜನ ಮೃತಪಟ್ಟಿದ್ದಾರೆ. 8-10 ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ಗ್ರಾಮಸ್ಥರ ಸಮೇತ ರೈತ ಸಂಘಟನೆಗಳು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ನಾಗರಾಜ ಚಳ್ಳೊಳ್ಳಿ ಎಚ್ಚರಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,
ಭಾರಿಗಾತ್ರದ ವಾಹನ ಓಡಾಡಿ ರಸ್ತೆಗಳು ಕೆಟ್ಟಿವೆ. ಈ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಸಂಗನಗೌಡ ಪೊಲೀಸ್ ಪಾಟೀಲ ಮಾತನಾಡಿ,
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದಿಂದ ಎನ್.ಹೆಚ್ . – 50 ರಿಂದ ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಲಾಚನಕೆರಿ, ಕುಣಿಕೇರಿ, ಕುಣಿಕೇರಿ ತಾಂಡ, ಹಾಲವರ್ತಿ, ಗವಿಮಠ ರಸ್ತೆ, ಆಲ್ಲನಗರ, ಗಿಣಿಗೇರಿ, ಕನಕಾಪುರ ಹಾಗೂ ಹ್ಯಾಟಿ-ಮುಂಡರಗಿ ಈ ಹಳ್ಳಿಗಳ ರಸ್ತೆಗಳ ಮೇಲೆ ಭಾರಿಗಾತ್ರದ ವಾಹನಗಳು ಕಾರ್ಖಾನೆಗಳಿಗೆ 35 ರಿಂದ 45 ಟನ್‌ಗಳವರೆಗೆ ಮೈನ್ಸ್ ಮತ್ತು ಕೋಕ್‌ಗಳನ್ನು ಹೇರಿಕೊಂಡು ಹೋಗುವುದರಿಂದ ರಸ್ತೆಗಳು ಹಾಳಾಗಿವೆ. ಹಳ್ಳಿಗಳಿಗೆ ಬಸ್‌ಗಳ ಸಂಚಾರವಿಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಶಾಸಕರಿಗೆ, ಸಂಸದರಿಗೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಹನುಮಂತಪ್ಪ ಬೆಣಕಲ್, ಎಪಿಎಂಸಿ ಸದಸ್ಯರು, ಭರಮಣ್ಣ ಸಿಂಗಟಾಲೂರ , ಬಾಳಪ್ಪ ಕುಂಬಾರ ಕೊಡದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೈಗಾರಿಕಾ ಕಂಪನಿಗಳಿಂದ ರಸ್ತೆ ಹಾಳು; ಸರಿಪಡಿಸಲು ರೈತರ ಗಡುವು
Advertisement