ಕೈ ಮುಗಿತೀವಿ, ದಯವಿಟ್ಟು ಕಾಳಜಿ ಕೇಂದ್ರಕ್ಕೆ ಬನ್ನಿ! ಅಧಿಕಾರಿಗಳಿಂದ ಸೋಂಕಿತರ ಮನವೊಲಿಕೆ

0
Spread the love

ಎರಡು ವರ್ಷದ ಮಗುವಿದೆ, ಕೊರೊನಾಗೆ ಮನೇಲೇ ಚಿಕಿತ್ಸೆ ಪಡೀತೀವಿ ಎಂದ ಕುಟುಂಬದ ಮನವೊಲಿಕೆ

Advertisement

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸೋಂಕು ತಗುಲಿದ್ದ ಕುಟುಂಬವೊಂದರ ಮನವೊಲಿಸಿದ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಕರೆ ತಂದ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಾರೋಗೇರಿ ‌ಗ್ರಾಮದ ಮಗು ಸಮೇತ ಕುಟುಂಬದ ನಾಲ್ವರಿಗೆ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದಿತ್ತು. ಆದರೆ ಅವರು ಆಸ್ಪತ್ರೆಗೆ ಬಾರದೆ‌ ಮನೆಯಲ್ಲಿಯೇ ಇದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ತಲಾಠಿ, ಪಿಡಿಒ ಮೂಲಕ ಕಾಳಜಿ ಕೇಂದ್ರಕ್ಕೆ ಕಳಿಸಿ ಕೊಡಲು ಮನವಿ ಮಾಡಿದ್ದರು. ಆದರೆ ಇದಕ್ಕೆ ಕುಟುಂಬದವರು ಸುತಾರಾಂ ಒಪ್ಪಲಿಲ್ಲ.

ಎರಡು ವರ್ಷದ ಮಗುವಿದೆ‌, ನಾವು ಮನೆಯಲ್ಲೇ ಇದ್ದು ಚಿಕಿತ್ಸೆ ತಗೋತೀವಿ ಅಂದರು. ಹಾಗೇ ಮಾಡೋಕೆ ಬರಲ್ಲ‌, ದಯವಿಟ್ಟು ಮುಂಡರಗಿಯ ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು. ಅದಕ್ಕೂ ಕೇರ್ ಮಾಡದ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಕರೆತರಲು ಖುದ್ದು ತಾಲೂಕು ಆಡಳಿತವೇ ಅವರ ಮನೆಗೆ ಬಂದಿತ್ತು. ಅವರ ಮನವಿಗೆ ಒಪ್ಪದ ಕುಟುಂಬ ಆಗಲ್ಲ ಆಗಲ್ಲ ಅಂದಿತು. ಕೊನೆಗೆ ಅಧಿಕಾರಿಗಳು ಅವರ ಮನೆ ಮುಂದೆ ಕೈ ಮುಗಿದು ಕುಳಿತು, ದಯವಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಬನ್ನಿ ಎಂದು ಮನವಿ ಮಾಡಿದರು.

ಕರಗಿದ ಮನಸ್ಸು

ಅಧಿಕಾರಿಗಳೆಲ್ಲರೂ ಸೇರಿ, ಹೀಗೆ ಕೈ ಮುಗಿದು ಕುಳಿತಿದ್ದನ್ನು ಕಂಡ‌ ಆ ಕುಟುಂಬದವರ ಮನಸ್ಸು ಕರಗಿತು. ಅಧಿಕಾರಿಗಳು ತಂದಿದ್ದ ವಾಹನದಲ್ಲಿ ಕುಳಿತು ಕೋವಿಡ್ ಕೇರ್ ಸೆಂಟರ್ ಗೆ ಬಂದರು.

ಮುಂಡರಗಿ ತಹಸೀಲ್ದಾರ್ ಆಶಪ್ಪ ಪೂಜಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ, ಹಾರೋಗೇರಿ ಗ್ರಾ.ಪಂ. ಅಧ್ಯಕ್ಷ ರವಿ, ಡಂಬಳ ಹೋಬಳಿಯ ಕಂದಾಯ ನಿರೀಕ್ಷಕ ಎಂ.ಎ. ನದಾಫ್, ಪಿಡಿಒ ಮಹೇಶ್ ಅಲ್ಲಿಪುರ ಸೇರಿದಂತೆ ನೋಡಲ್ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here