ಕೊಕ್ಕರಗುಂದಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ‘ಕೊಕ್ಕೆ’; ಹರಿಯುತ್ತಿರುವ ಹಳ್ಳ ದಾಟಿದರೆ ಮಾತ್ರ ಶಾಲೆಗೆ ಹಾಜರು!

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

Advertisement

ತಾಲೂಕಿನ ಕೊಕ್ಕರಗುಂದಿ ಗ್ರಾಮವು ಹಲವು ವರ್ಷಗಳಿಂದಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದ್ದು, ಸಾರಿಗೆ ಬಸ್ ವ್ಯವಸ್ಥೆಯೂ ಸರಿಯಾಗಿ ಇಲ್ಲದೆ, ಹರಿಯುತ್ತಿರುವ ಎರಡು ಹಳ್ಳ ದಾಟಿದರೆ ಮಾತ್ರ ತರಗತಿಗಳಿಗೆ ಹಾಜರಿ ಬೀಳುತ್ತದೆ.

ಗ್ರಾಮದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, 800ಕ್ಕೂ ಅಧಿಕ ಮತದಾರರನ್ನು ಹೊಂದಿದೆ. ತಾಲೂಕಿನ ಕಡೇ ಹಳ್ಳಿ ಇದಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹಾಳಾಗಿವೆ. 1ರಿಂದ 7ನೇ ತರಗತಿ ವರೆಗೂ ಸರಕಾರಿ ಶಾಲೆ ಇದ್ದು, ಮುಂದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದೆ ಇರುವುದರಿಂದ ಆರೋಗ್ಯ ತಪಾಸಣೆಗೂ ಬೇರೆ ಊರುಗಳನ್ನೇ ಅವಲಂಬಿಸಬೇಕಾಗಿದೆ. ಇನ್ನೂ ಇಲ್ಲಿಯ ಬಹುತೇಕ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಲೇಹೊಸೂರ ಗ್ರಾಮದಲ್ಲಿಯೇ ಹೊಂದಿದ್ದು, ಇದಕ್ಕೂ ದೈನಂದಿನ ಕೆಲಸಗಳನ್ನು ಬಿಟ್ಟು ಅಲೆದಾಡಬೇಕಾಗಿದೆ.

ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಮಾರಕ

ಪ್ರೌಢಶಾಲೆ ಸೇರಬೇಕೆಂದರೆ ಬೆಳ್ಳಟ್ಟಿ-ಲಕ್ಷ್ಮೇಶ್ವರ ಮುಂತಾದ ಕಡೆಗಳಿಗೆ ತೆರಳಬೇಕಾಗಿದೆ. ಬೆಳಗ್ಗೆ 7.15ಕ್ಕೆ ಒಂದೇ ಒಂದು ಬಸ್ ಮೇವುಂಡಿಯಿಂದ ಬರುತ್ತದೆ. ಲಕ್ಷ್ಮೇಶ್ವರಕ್ಕೆ ತೆರಳುತ್ತದೆ. ಆಮೇಲೆ ತಾಲೂಕು ಕೇಂದ್ರ ಶಿರಹಟ್ಟಿ ಅಥವಾ ಬೇರಾವುದೇ ಕಡೆಗಳಿಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ.

ಹೆಣ್ಣುಮಕ್ಕಳು ನಡೆದುಕೊಂಡು ಅಷ್ಟು ದೂರ ತೆರಳಿ ಶಾಲೆ ಕಲಿಯುವುದಕ್ಕೆ ಪೋಷಕರ ಸಹಮತವಿಲ್ಲದೆ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲಸ ನಿಮಿತ್ತ ಬೇರೆ ಊರುಗಳಿಗೆ ತೆರಳಲು 3-4 ಕಿ.ಮೀ. ನಡೆಯಬೇಕು. ಆಮೇಲೆ ಏನಾದರೂ ವಾಹನ ಸಿಕ್ಕರೆ ಪುಣ್ಯ.

ಆಮರಣ ಉಪವಾಸ: ಎಚ್ಚರಿಕೆ

ಗ್ರಾಮಸ್ಥರಾದ ಚನ್ನಬಸನಗೌಡ ಪಾಟೀಲ, ವಸಂತಗೌಡ ಪಾಟೀಲ ಮಾತನಾಡಿ, ಸಮರ್ಪಕ ಬಸ್ ಸಂಚಾರಕ್ಕೆ ಹಲವಾರು ಬಾರಿ ವಿನಂತಿಸಿಕೊಳ್ಳಲಾಗಿತ್ತು, ಇಲ್ಲಿಯವರೆಗೂ ಈ ಕೆಲಸ ಆಗಿಲ್ಲ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರಹಟ್ಟಿ ತಹಸೀಲ್ದಾರ್ ಕಚೇರಿ ಎದುರುಗಡೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದರು.

2-3 ದಿನಗಳಲ್ಲಿ ಕ್ರಮ

ಲಕ್ಷ್ಮೇಶ್ವರ ಡಿಪೋ ಮ್ಯಾನೇಜರ್ ಅಶೋಕ ವೆರ್ಣೇಕರ ಪ್ರತಿಕ್ರಿಯಿಸಿ, 2-3 ದಿನಗಳಲ್ಲಿ ಸಮರ್ಪಕ ಬಸ್ ಸಂಚಾರ ಆರಂಭಿಸಲು ಕ್ರಮ ಕೈಕೊಳ್ಳಲಾಗುವುದು ಎಂದರು.


Spread the love

LEAVE A REPLY

Please enter your comment!
Please enter your name here