Homekoppalಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್; ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ...

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್; ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅತೀ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ.

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ಸಿ.ಪಿ. ಯೋಗೇಶ್ವರ, ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟಶ್ರೀನಿವಾಸ ಪೂಜಾರಿ, ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ. ಅತೀಕ್, ಮಹೇಂದ್ರಜೈನ್, ಪ್ರವಾಸ್ಓದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೇ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕುಮಾರ್ ಪುಷ್ಕರ್, ಕೊಪ್ಪಳ ಜಿಲ್ಲಾಧಿಕಾರಿ ಶ್ರೀ ವಿಕಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಂಜನಾದ್ರಿ ಪರ್ವತಕ್ಕೆ ರಾಮಾಯಣದಲ್ಲಿ ವಿಶೇಷ ಸ್ಥಾನವಿದೆ. ಶ್ರೀರಾಮನ ಭಕ್ತನಾಗಿರುವ ಆಂಜನೇಯನನ್ನು ಶ್ರೀರಾಮ ಹಾಗೂ ಲಕ್ಷ್ಮಣರು ಅಂಜನಾದ್ರಿ ಬೆಟ್ಟದಲ್ಲಿ ಬೇಟಿಯಾಗಿದ್ದರಂತೆ. ಅಂಜನಾ ದೇವಿಯು ಆಂಜನೇಯನಿಗೆ ಇಲ್ಲಿ ಜನ್ಮ ನೀಡಿದ್ದರಿಂದ, ಈ ಬೆಟ್ಟಕ್ಕೆ ಅಂಜನಾದ್ರಿ ಪರ್ವತ ಎಂದು ಹೆಸರಿಡಲಾಗಿದೆ.
ತುಂಗಾಭದ್ರಾ ನದಿಯ ದಡದಲ್ಲಿರುವ ಈ ಬೆಟ್ಟಕ್ಕೆ ದಕ್ಷಿಣ ಭಾರತದ ಕಾಶಿ ಎಂದು ಪ್ರಸಿದ್ದಿ ಹೊಂದಿದೆ. ಈ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಭೆ ನಿರ್ಧಾರ ಕೈಗೊಂಡಿತು. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲು ಸಹ ನಿರ್ಧರಿಸಲಾಯಿತು.
ಏಪ್ರಿಲ್ 16 ರಂದು ಸಚಿವರುಗಳಾದ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಸಿ.ಪಿ. ಯೋಗೇಶ್ವರ, ಶ್ರೀ ಕೋಟಶ್ರೀನಿವಾಸ ಪೂಜಾರಿ, ಶ್ರೀ ಬಿ.ಸಿ. ಪಾಟೀಲ್ ಹಾಗೂ ಅರಣ್ಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ರವರು ಅಂಜನಾದ್ರಿ ಬೆಟ್ಟಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ನಂತರ, ಅಂಜನಾದ್ರಿ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು.
ಪ್ರಥಮ ಹಂತದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಕುಡಿಯುವ ನೀರು, ಶೌಚಾಲಯ, ಸ್ನಾನದ ಗೃಹ ಮತ್ತು ರಸ್ತೆ ನಿರ್ಮಾಣ ಮಾಡುವುದು. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಅಳವಡಿಸುವುದು. ಬೆಟ್ಟದ ಕೆಳಭಾಗದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.
ಬೆಟ್ಟದ ಮುಂಭಾಗದಲ್ಲಿರುವ ಹುಲಿಗಿ ಗಂಗಾವತಿ ರಾಜ್ಯ ಹೆದ್ದಾರಿಯನ್ನು 1 ಕಿ.ಮೀ. ಅಗಲೀಕರಣ ಮಾಡುವುದು. ಬೀದಿ ದೀಪಗಳನ್ನು ಅಳವಡಿಸುವುದು. ಸೇವಾ ಹಾಗೂ ಟಿಕೆಟ್ ಕೌಂಟರ್ ನಿರ್ಮಾಣ ಮಾಡುವುದು. ಪ್ರವಾಸಿಗರಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವುದು. ಮೊಬೈಲ್ ಸಂಪರ್ಕಕ್ಕಾಗಿ ಮೊಬೈಲ್ ಟವರ್ ಅಳವಡಿಸುವುದು.
ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ರೂ.50.00ಕೋಟಿಗಳನ್ನು ಒದಗಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು ತಮ್ಮ ಇಲಾಖೆಯಲ್ಲಿ ಮೀಸಲಿಟ್ಟಿರುವ ರೂ.268.00ಲಕ್ಷಗಳನ್ನು ಹಾಗೂ ಮುಜರಾಯಿ ಇಲಾಖೆಯಲ್ಲಿರುವ ರೂ.140.00ಲಕ್ಷ, ಪ್ರವಾಸೋದ್ಯಮ ಇಲಾಖೆಯಿಂದ ರೂ.50.00ಲಕ್ಷ ಮತ್ತು ಕೇಂದ್ರ ಕೈಗಾರಿಕೆ ಇಲಾಖೆಯ ಹ್ಯಾಂಡಿ ಕ್ರ್ಯಾಫ್ಟ್ ನಿಂದ ರೂ.10.00ಕೋಟಿಗಳನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣವನ್ನು ಮೀಸಲಿರಿಸಲಾಗಿದೆ. ಒಟ್ಟು ರೂ.50.00 ಕೋಟಿ 18.00ಲಕ್ಷ ಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳನ್ನು ಮಾಡಲು ಸಭೆ ನಿರ್ಧರಿಸಿತು.
ಎರಡನೇ ಹಂತದಲ್ಲಿ ಪ್ರವಾಸಿಗರು ತಂಗಲು ಯಾತ್ರಿ ನಿವಾಸ ಹೋಟೇಲ್ ಹಾಗೂ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವುದು. ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುವುದು. ತುಂಗಭದ್ರಾ ನದಿಯಲ್ಲಿ ವಾಟರ್ ಸ್ಪೋರ್ಟ್ಸ್ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವುದು. ಋಷಿಮುಖ ಪರ್ವತದಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೇದ, ವಾಸ್ತು, ಜ್ಯೋತಿಷ್ಯ, ಗೃಹ ನಕ್ಷತ್ರ, ಭೂಕಂಪನ, ಸಮುದ್ರ ಕಂಪನ ಹಾಗೂ ಶರೀರ ಆವಯವಗಳ ಪಾಠಗಳ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾರಂಭಿಸುವುದು. ಸಾಣಾಪುರ ಕೆರೆ ಹತ್ತಿರ ನೀರನ ವಿಭಿನ್ನ ವಿನ್ಯಾಸಗಳನ್ನು ಮಾಡುವ ಲೇಸರ್ ಶೋ ಮಾಡುವುದು. ಒಟ್ಟಾರೆ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಯಿತು.
ದೇಶದ 4 ಐತಿಹಾಸಿಕ ಹಾಗೂ ಪುರಾತನ ಸರೋವರಗಳಲ್ಲಿ ಪಂಪ ಸರೋವರ ಸಹ ಒಂದು ಆಗಿದ್ದು, ಸಮಗ್ರವಾಗಿ ಅಭಿವೃದ್ಧಿ ಮಾಡುವುದು. 101 ಬಾವಿಗಳ ಪುನಶ್ಚೇತನ ಸೇರಿದಂತೆ ಅಂಜನಾದ್ರಿ ಬೆಟ್ಟ ಮತ್ತು ಆನೆಗುಂದಿ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಂಜನಾದ್ರಿ ಬೆಟ್ಟದಲ್ಲಿ ಒಂದು ಗೋಶಾಲೆಯಿದ್ದು, ಸಾವಿರ ದನಕರುಗಳಿವೆ ಇದರ ಜೊತೆಗೆ ಇನ್ನೊಂದು ಗೋಶಾಲೆ ತೆರೆಯಲು ಸಭೆ ನಿರ್ಧರಿಸಿತು.
ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ದಿನ ಮೂರು ಸಾವಿರಕ್ಕೂ ಹೆಚ್ಚು ಹಾಗೂ ಮಂಗಳವಾರ ಮತ್ತು ಶನಿವಾರ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹನುಮಂತನ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!