ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಎರಡು ವರ್ಷಗಳ ನಂತರ ಕೊಪ್ಪಳ ನಗರಸಭೆಯಲ್ಲಿ ಬುಧವಾರ ಸದಸ್ಯರೆದುರು 2022-23ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಯಿತು. 16.85 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ನಗರಸಭೆ ಸದಸ್ಯರು ಕೆಲ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂತು.
ಸುಮಾರು ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆ ಸುಸೂತ್ರವಾಗಿ ನಡೆಯಿತು. ರಾಜಶೇಖರ ಆಡೂರು ಸೇರಿದಂತೆ ಕೆಲ ಸದಸ್ಯರು ಬಜೆಟ್ ಮಂಡನೆ ಮುಗಿದ ಮೇಲೆ ಸಭೆಗೆ ಪ್ರವೇಶಿಸಿದರು.
ಬಜೆಟ್‌ನ ಸಂಕ್ಷಿಪ್ತ ವಿವರ:
ನಗರಸಭೆಗೆ 23.87 ಕೋಟಿ ರೂಪಾಯಿ ರಾಜತ್ವ ಸ್ವೀಕೃತಿಯಾಗಿದ್ದು, 8.31 ಕೋಟಿ ರೂಪಾಯಿ ಬಂಡವಾಳ ಸ್ವೀಕೃತಿ ಮತ್ತು 4.15 ಕೋಟಿ ರೂಪಾಯಿ ಅಸಾಧಾರಣ ಸ್ವೀಕೃತಿಯಾಗಿದ್ದು ಒಟ್ಟಾರೆ ನಗರಸಭೆಗೆ ಬಂದ ಸ್ವೀಕೃತಿ 36.34 ಕೋಟಿ ರೂಪಾಯಿ.
ಹಾಗೆಯೇ ಈ ಸಾಲಿನಲ್ಲಿ ಪಾವತಿಯಾದ ರಾಜಸ್ವ 22.75 ಕೋಟಿ ರೂಪಾಯಿ. 9.26 ಕೋಟಿ ರೂಪಾಯಿ ಬಂಡವಾಳ ಪಾವತಿ ಹಾಗೂ 4.15 ಕೋಟಿ ರೂಪಾಯಿ ಅಸಾಧಾರಣ ಪಾವತಿಯಾಗಿದ್ದು, ಒಟ್ಟಾರೆ ನಗರಸಭೆಯಿಂದ ಪಾವತಿಯಾಗಿದ್ದು 36.17 ಕೋಟಿ ರೂಪಾಯಿ.
ನಗರಸಭೆಯ ಸ್ವೀಕೃತಿ ಮತ್ತು ಪಾವತಿಯನ್ನು ತಾಳೆ ಮಾಡಿದಾಗ 16.85 ಲಕ್ಷ ರೂಪಾಯಿ ಉಳಿತಾಯವಾಗಿದೆ. ಇದರಲ್ಲಿ ಸರಕಾರದ ಅನುದಾನ ಹೊರತುಪಡಿಸಿ ನಗರಸಭೆ ನಿಧಿಗೆ 8.93 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.