ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಮಹಾಮಾರಿಯೊಂದಿಗೆ ಬ್ಲ್ಯಾಕ್ ಪಂಗಸ್ ಸೋಂಕಿನ ಕಾಟ ಕೂಡ ಶುರುವಾಗಿದೆ. ಸದ್ಯ ರಾಜ್ಯದಲ್ಲಿ 100ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿವಿಧ ಪ್ರದೇಶಗಳು ಸೇರಿದಂತೆ ಒಟ್ಟು 9 ಜನ ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರು ಕೂಡ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕೊರೊನಾದಿಂದ ಗುಣಮುಖರಾಗಿರುವ ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ವಿಪರೀತ ಸ್ಟೀರಾಯ್ಡ್ ಬಳಕೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕುಸಿದು ಅತಿ ಸೂಕ್ಷ್ಮ ಶಿಲೀಂಧ್ರಗಳ ದಾಳಿಗೆ ಕಂಗೆಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಪ್ರಾರಂಭದಲ್ಲಿ ಮೂಗು, ಶ್ವಾಸಕೋಶ, ಕಣ್ಣು ಮತ್ತು ಬಳಿಕ ಮೆದುಳಿಗೆ ಫಂಗಸ್ ದಾಳಿ ನಡೆಸುತ್ತದೆ. ಈ ರೋಗದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಬೇಕು ಎಂದು ವೈದ್ಯರು ಕಿವಿ ಮಾತು ಹೇಳುತ್ತಿದ್ದಾರೆ.
ಬ್ಲ್ಯಾಕ್ ಪಂಗಸ್ ಗೆ ಕೊಡುವ ಆಂಫೊಟೆರಿಸಿನ್ – ಬಿ ಇಂಜೆಕ್ಷನ್ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ವಿರಳವಾಗಿದೆ ಕೂಡ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ವೈದ್ಯರು ಮನವಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1500 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, 50ಕ್ಕಿಂತ ಹೆಚ್ಚು ಜನ ಸಾವನ್ನಪ್ಪಿದ್ದಾರೆ.



