ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಕೊರೊನಾ ಭಯದಿಂದಾಗಿ ನಿವೃತ್ತ ಉಪ ತಹಸೀಲ್ದಾರ್ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ನಡೆದಿದೆ.
ಸೋಮಾ ನಾಯಕ್(72) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಕಾರಿನಲ್ಲಿ ತಾವೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ನಿವೃತ್ತಿಯ ನಂತರ ತೋಟ ನೋಡಿಕೊಂಡಿದ್ದ ಸೋಮಾ ನಾಯಕ್ ಅವರಿಗೆ ಸೋಂಕು ತಗುಲಿತ್ತು. ಇದರಿಂದ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವಂತಾಗಿದೆ. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಇಲ್ಲ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಎದುರೇ ಏನಾದರೂ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಪಲ್ಸ್ ರೇಟ್ ಕಡಿಮೆಯಾಗಿ, ಉಸಿರಾಟಕ್ಕೆ ತೊಂದರೆಯಾಗಿ ಜೀವಕ್ಕೆ ಕಷ್ಟವಾದರೆ ಮಾತ್ರ ಆತ್ಮಹತ್ಯೆ. ಸುಖವಾಗಿ ಸತ್ತರೆ ಚಿಂತೆಯೇ ಇಲ್ಲ. ಮಾರಿಕಾಂಬಾ ದೇವಿ ನಿನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅಷ್ಟರಲ್ಲಿಯೇ ನೀನು, ನನ್ನನ್ನ ಕರೆದುಕೊಂಡು ಬಿಟ್ಟೆ.
ಕೊರೊನಾ ಪಾಸಿಟಿವ್ ಇದ್ದ ಕಾರಣ ಅಗ್ನಿಸ್ಪರ್ಶ ಮಾಡಲು ಅನುಕೂಲವಾಗುವಂತೆ ಜಾಗ ಆರಿಸಿಕೊಂಡಿದ್ದೇನೆ.
ಇದು ಪ್ರಪಂಚಕ್ಕೆ ಆದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮ ಜೀವಕ್ಕೆ ದಾರಿ ಮಾಡಿದ್ದೇನೆ. ಈ ಜೀವನ ಸಾಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಡಿಸಿಸಿ ಬ್ಯಾಂಕಿನ ನನ್ನ ಖಾತೆಯಲ್ಲಿ ರೂ. 1.28 ಲಕ್ಷ ಇದ್ದು ಈ ಹಣವನ್ನು ಜಮೆ ಮಾಡಬೇಕು. ನಾನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಟ್ಟಿದ್ದೇನೆ. ನನ್ನ ಚೈನು, ಉಂಗುರ ಬೀರೂವಿನಲ್ಲಿ ಇದೆ. ನೀವೆಲ್ಲರೂ ಚೆನ್ನಾಗಿರಿ ಎಂದು ಬರೆದಿದ್ದಾರೆ.