ವಿಜಯಸಾಕ್ಷಿ ಸುದ್ದಿ, ಧಾರವಾಡ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್ ಗಳ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆತಂಕ ಮೂಡಿಸಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೂ ಸೋಂಕು ಪಸರಿಸಿತ್ತು. ಹೀಗಾಗಿ ಎಲ್ಲೆಡೆ ಭಯ ವ್ಯಕ್ತವಾಗಿತ್ತು.
ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಹತೋಟಿಗೆ ಬಂದಿತ್ತು. ಲಾಕ್ ಡೌನ್ ನಿಂದಾಗಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಲು ಪ್ರಾರಂಭಿಸಿತು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿಗೆ ಬಂದು ನಿಂತಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲಾಗಿತ್ತು. ಸದ್ಯ ಸೋಂಕು ಹತೋಟಿಗೆ ಬಂದ ಕಾರಣಕ್ಕೆ ಕೋವಿಡ್ ಕೇರ್ ಸೆಂಟರ್ ಗಳ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ 10, ಹುಬ್ಬಳ್ಳಿ ಗ್ರಾಮೀಣ 14, ಕಲಘಟಗಿ 12, ಅಣ್ಣಿಗೇರಿ 8, ಕುಂದಗೋಳ 16, ನವಲಗುಂದ 8, ಅಳ್ನಾವರ 5 ಸೇರಿದಂತ ಜಿಲ್ಲೆಯಲ್ಲಿ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಮ್ ಐಸೋಲೇಷನ್ ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಕೊರೊನಾ ಸೋಂಕಿತರೊಂದಿಗೆ ಅವರ ಕುಟುಂಬಸ್ಥರಿಗೂ ಕೂಡ ಇರಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2,011 ಸೋಂಕಿತರು ಕೋವಿಡ್ ಕೇರ್ ಸೆಟಂರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇಷ್ಟೊಂದು ಜನ ರೋಗಿಗಳ ಪೈಕಿ 1,940 ಜನರು ಗುಣಮುಖರಾಗಿ ಮನೆಗೆ ಮರಳಿದ್ದರು. ಸದ್ಯ ಕೇವಲ 71 ಜನ ಮಾತ್ರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿರುವ 20 ಕೋವಿಡ್ ಕೇರ್ ಸೆಟಂರ್ ಬಿಟ್ಟು, 64 ಕೇಂದ್ರಗಳನ್ನು ಮುಚ್ಚಲಾಗಿದೆ.