ವಿಜಯಸಾಕ್ಷಿ ಸುದ್ದಿ, ನರಗುಂದ
ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಶೈನಾಜ್ ಮುಜಾವರ ಹಾಗೂ ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ನೇತೃತ್ವದಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ಹಾಗೂ ಗೋಡೆ ಮೇಲೆ ಚಿತ್ರ ಬಿಡಿಸುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ರಸ್ತೆ, ದೇವಸ್ಥಾನಗಳ ಮುಂದೆ ಜಾಗೃತಿ ಕಲಾಕೃತಿಗಳನ್ನು ಬರೆಸುವ ಮೂಲಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತಿದೆ.
ತಾಲೂಕಿನ ಚಿಕ್ಕ ನರಗುಂದ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನರಗುಂದ, ಚಿಕ್ಕನರಗುಂದ ಒಳ ರಸ್ತೆ, ಚಿಕ್ಕನರಗುಂದ ಬೆನಕೊಪ್ಪ, ಸಂಕದಾಳ ಮುಖ್ಯ ರಸ್ತೆ ಹಾಗೂ ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳು, ದೇವಸ್ಥಾನ, ನೀರಿನ ಟ್ಯಾಂಕ್, ಗೋಡೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೊರೊನಾ ಜಾಗೃತಿ ಚಿತ್ರ ಹಾಗೂ ಬರವಣಿಗೆ ಸಂದೇಶ ಬರೆಯಿಸಲಾಗಿದೆ.
ಕೊರೊನಾ ವೈರಸ್ ಚಿತ್ರ ಬರೆಯಿಸಿ ಆ ಚಿತ್ರದ ಸುತ್ತಮುತ್ತಲೂ ನನ್ನ ಮಾಸ್ಕ್ ನನ್ನ ಲಸಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗಳಬಾರದು, ಮಾಸ್ಕ್ ಧರಿಸಿ, ಕೊರೊನಾ ಓಡಿಸಿ, ನಿಮ್ಮ ಆರೋಗ್ಯ ಸುರಕ್ಷಿತವಾಗಿ ಕಾಪಾಡಿಕೊಳ್ಳಿ, ಆರು ಅಡಿ ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೇಸರ್ ಬಳಸಿ, ಆಗಾಗ ಸಾಬೂನಿನಿಂದ ಕೈ ತೊಳೆಯಿರಿ, ಕೈ ತೊಳೆಯದೆ ಕಣ್ಣು, ಮೂಗು, ಬಾಯಿ ಮುಟ್ಟಬೇಡಿ, ಬಿಸಿ ನೀರನ್ನು ಸೇವಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂಬ ಬರಹಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಿಡಿಓ ಹೇಳಿದ್ದಾರೆ.
ಮೈಕ್ ಮುಖಾಂತರ ಹಾಗೂ ಕಾಲ್ನಡಿಗೆ ಜಾತಾ ನಡೆಸಲಾಗುತ್ತಿದೆ ಎಂದು ಪಿಡಿಓ ಶೈನಾಜ್ ಮುಜಾವರ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷಾದ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಬಾಪು ಹಿರೇಗೌಡರ, ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡರ, ಈರವ್ವ ಮುದಿಗೌಡರ, ಶೃತಿ ಬ್ಯಾಳಿ, ಶೋಭಾ ಕೋಣಣ್ಣವರ, ನೀರ್ಮಲಾ ತಳವಾರ, ಶಂಕ್ರವ್ವ ಚಲವಾದಿ ಹಾಗೂ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಪಂ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.