ವಿಜಯಸಾಕ್ಷಿ ಸುದ್ದಿ, ಗದಗ
ಇಡೀ ದೇಶವೇ ಮಹಾಮಾರಿಗೆ ನಲುಗುತ್ತಿದೆ. ಸಾವಿನ ಸುದ್ದಿಗಳು ದೇಶಾದ್ಯಂತ ಆತಂಕ ಸೃಷ್ಟಿಸುತ್ತಿವೆ. ಹೀಗಾಗಿ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದೆ. ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಈ ಗ್ರಾಮಸ್ಥರ ಉಡಾಫೆಗೆ ಏನನ್ನಬೇಕು? ಎನ್ನುವುದೇ ತಿಳಿಯುತ್ತಿಲ್ಲ.
ಕೊರೊನಾ ತೊಲಗಿಸಲು ಸರ್ಕಾರ, ಅಧಿಕಾರಿಗಳು, ವಾರಿಯರ್ಸ್ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಜನರು ಜವಬ್ದಾರಿ ಮರೆತು ಓಕಳಿಯಾಟ ಆಡಿದ್ದಾರೆ.
ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಹಿನ್ನೆಲೆಯಲ್ಲಿ ಗ್ರಾಮದ ತುಂಬೆಲ್ಲ ಜನರು ಹನುಮಂತ ದೇವರ ಓಕುಳಿ ಆಡಿದ್ದಾರೆ. ಓರ್ವ ಮಹಿಳೆ ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾಳೆ. ನೀರು ಎರಚುವವರಿಗೆ ಅವಳು ದೊಣ್ಣೆಯಿಂದ ಹೊಡೆಯುತ್ತಾಳೆ. ಹೀಗೆ ಜನ ತಮ್ಮ ಜೀವದ ಹಂಗು ತೊರೆದು, ಕೊರೊನಾ ಭಯವಿಲ್ಲದೆ ಓಕಳಿ ಆಡಿದ್ದಾರೆ. ಈ ಓಕಳಿ ನೋಡಲು ಜನ ಸಾಗರವೇ ಇತ್ತು.
ಮಾಸ್ಕ್ ಧರಿಸಿ, 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ, ತಜ್ಞರು ಹಾಗೂ ವೈದ್ಯರು ಜನರಿಗೆ ಕೈ ಮುಗಿದು ಇನ್ನೂ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿಯ ಜನ ಅವುಗಳಿಗೆ ಡೋಂಟ್ ಕೇರ್ ಎಂದಿದ್ದಾರೆ. ಯಾವುದೇ ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳದೆ ಮೈಮರೆತು ಓಕುಳಿಯಲ್ಲಿ ಮಿಂದೆದಿದ್ದಾರೆ.
ದೇಶದ ತುಂಬೆಲ್ಲ ಮಹಾಮಾರಿ ಸಿಕ್ಕ ಸಿಕ್ಕವರನ್ನೆಲ್ಲ ಬಲಿ ಪಡೆಯುತ್ತಿದೆ. ಜನರು ಭಯದಿಂದಾಗಿ ಮನೆಯಿಂದಲೇ ಹೊರಗೆ ಬರುತ್ತಿಲ್ಲ. ಆದರೆ, ಇಲ್ಲಿಯ ಜನ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದರೆ, ಜನ ಇಷ್ಟೊಂದು ಮೈಮರೆತು ಓಕುಳಿ ಆಡಿದರೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿ,ಮೌನದಿಂದ ಕುಳಿತಿದೆ.
ಈ ಘಟನೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಓಕುಳಿ ನೋಡಿದರೆ ಬಹುಶಃ ಕೊರೊನಾವೇ ಹೆದರಿ ಓಡಿ ಹೋಗಿರಬಹುದೇನೊ ಅನ್ನುವಷ್ಟರ ಮಟ್ಟಿಗೆ ಈ ಜನ ವರ್ತಿಸಿದ್ದಾರೆ.