ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ನಿಯಮ ಉಲ್ಲಂಘಿಸಿ ಜ. 17ರಂದು ಬೆಳಗಾವಿಯಲ್ಲಿ ನಡೆಸಿದ್ದ ಬಿಜೆಪಿ ಸಮಾವೇಶದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಬಗ್ಗೆ ಜಿಲ್ಲಾ ಪೊಲೀಸ್ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದ ತಪ್ಪಿತಸ್ಥರ ವಿರುದ್ಧ ಪೊಲೀಸರು ದಂಡ ವಿಧಿಸಿದ್ದರು.
ಕೇವಲ ದಂಡ ವಿಧಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಕೋರ್ಟ್, ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿಲ್ಲ. ಆಯೋಜಕರ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ. ಕಾಯ್ದೆಯ ನಿಯಮಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಪ್ರಮಾಣ ಪತ್ರ ಒಪ್ಪಲು ಆಗುವುದಿಲ್ಲ. ಜೂ. 3ರೊಳಗಾಗಿ ಹೊಸ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದೆ.
ಅಲ್ಲದೇ, ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಈ ಹಿಂದೆ ನೀಡಿದ್ದ ಆದೇಶ ಪಾಲಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಹೀಗಾಗಿ ವಿಚಾರಣೆಯನ್ನು ಜೂ. 4ಕ್ಕೆ ಮುಂದೂಡಲಾಗಿದೆ. ಜನವರಿ 17 ರಂದು ನಡೆದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು.