ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಜೋರಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಒಂದು ಗ್ರಾಮದಲ್ಲಿನ ಜನರು ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರ ಏನೇ ಹೇಳಿದರೂ ಜನರ ಮೂಢನಂಬಿಕೆ ಮಾತ್ರ ನಿಲ್ಲುತ್ತಿಲ್ಲ. ಇಲ್ಲಿಯೂ ಇದೇ ರೀತಿ ಜನರು ಮೂಢ ನಂಬಿಕೆಯ ಮೊರೆ ಹೋಗಿದ್ದಾರೆ. ಹೀಗಾಗಿ ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಗ್ರಾಮದ ಜನರು ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮೂರ್ತಿಗೆ ಬೇವು ಉಡಿಸಿ, ಕುರಿ, ಕೋಳಿ, ಮೊಸರನ್ನವನ್ನು ನೈವೇದ್ಯ ಮಾಡಿ ಅರ್ಪಿಸಿದ್ದಾರೆ. ಪೂಜೆ ಮುಗಿದ ನಂತರ ಗ್ರಾಮಸ್ಥರು ಕೊರೊನಮ್ಮನನ್ನು ಊರ ಸೀಮೆ ದಾಟಿಸಿದ್ದಾರೆ.
ಈ ಕಾರ್ಯಕ್ರಮ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮಾಸ್ಕ್ ಧರಿಸದೆ ದೈಹಿಕ ಅಂತರ ಮರೆತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನ ಭಾಗವಹಿಸಿದ್ದರು. ಜನರು ಕೊರೊನಾ ಭೀತಿ ಮರೆತು, ಮೌಢ್ಯಾಚರಣೆ ಮಾಡುತ್ತಿರುವುದಕ್ಕೆ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.