ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ
ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗದ ಕಾರಣ ಆಸ್ಪತ್ರೆಯ ವಾರ್ಡ್ ನಲ್ಲಿಯೇ ಆ ವ್ಯಕ್ತಿ ಬರೋಬ್ಬರಿ 2 ಗಂಟೆಗಳ ಕಾಲ ಒದ್ದಾಡಿ, ನರಳಾಡಿ ಕೊನೆಯುಸಿರೆಳೆದ ಘಟನೆ ಇಲ್ಲಿಯ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಹೀಗೆ ನರಳಾಡಿ ಮೃತಪಟ್ಟ ವ್ಯಕ್ತಿ ಶಿಕಾರಿಪುರ ಮೂಲದವರಾಗಿದ್ದು, 46 ವರ್ಷದ ವ್ಯಕ್ತಿ ಎನ್ನಲಾಗಿದೆ. ಕೊರೊನಾ ಸೋಂಕಿನಿಂದ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಇವರನ್ನು ಆಂಬುಲೆನ್ಸ್ ಮೂಲಕ ಶಿಕಾರಿಪುರದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಷ್ಟರಲ್ಲಿಯೇ ಅವರ ಆಕ್ಸಿಜನ್ ಮಟ್ಟ ಶೇ. 40ಕ್ಕೆ ಕುಸಿದಿತ್ತು. ಆದರೆ, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲ ವೆಂಟಿಲೇಟರ್ ನಲ್ಲಿ ರೋಗಿಗಳು ಇದ್ದರು. ಯಾವ ರೊಗಿಯನ್ನೂ ಇದರಿಂದ ಹೊರತರುವ ಸ್ಥಿತಿಯಲ್ಲಿ ವೈದ್ಯರು ಇರಲಿಲ್ಲ. ಹೀಗಾಗಿ ಜನರಲ್ ವಾರ್ಡ್ ನಲ್ಲಿ ರೋಗಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಈ ರೋಗಿ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ರೋಗಿ ಎಷ್ಟೇ ನರಳಾದಿರೂ ವೈದ್ಯರು, ನರ್ಸ್ ಗಳು ಏನೂ ಮಾಡದ ಸ್ಥಿತಿಯಲ್ಲಿದ್ದರು. ಪರಿಣಾಮ ರೋಗಿ ಒದ್ದಾಡಿ ಸಾವನ್ನಪ್ಪಿದ್ದಾರೆ.