ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಸರಕಾರ, ಇದು ಮನುಷ್ಯತ್ವದ ಲಕ್ಷಣವಲ್ಲ; ಎಚ್ ಕೆ ಪಾಟೀಲ ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಕೊರೊನಾ ಸಮಯದಲ್ಲಿ ಜನರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವಾಗಲಿ ಹಾಗೂ ಕೇಂದ್ರ ಸರ್ಕಾರವಾಗಲಿ ಅವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿಲ್ಲ. ಜವಾಬ್ದಾರಿ ಇಲ್ಲದಂತೆ ನಡೆದುಕೊಳ್ಳುತ್ತಿವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಜನರು ಕಣ್ಣೀರಿನೊಳಗೆ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅಂತಹ ಕುಟುಂಬಗಳಿಗೆ ನೆರವು ಕಲ್ಪಿಸುವುದನ್ನು ಬಿಟ್ಟು ಸರ್ಕಾರ ಅಮಾನವೀಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿಯೇ ರಾಷ್ಟ್ರೀಯ ವಿಪತ್ತು ಎಂದು ಈ ಕಾಲವನ್ನು ಘೋಷಿಸಿ ಎಂದು ನಾವು ಮನವಿ ಮಾಡಿದ್ದೆವು. ಆದರೆ, ಜನಪರ ಕಾಳಜಿ ಇಲ್ಲದ ಬಿಜೆಪಿ ಆ ಕಾರ್ಯ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನು ಜಾರಿಗೊಳಿಸಿದ್ದರು. ಅದು ಜನಪರವಾದ ಕಾನೂನಾಗಿತ್ತು. ಈ ಕಾನೂನಿನಲ್ಲಿ ಸಾಕಷ್ಟು ನಿದರ್ಶನವನ್ನು ನೀಡಿದ್ದರು. ಈ ಕಾನೂನಿನ ಅಡಿ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳಿಗೆ 4 ಲಕ್ಷ ರೂ. ಪರಿಹಾರ ನೀಡುವ ಕಾನೂನು ಜಾರಿಗೊಳಿಸಿದ್ದರು.

ಮೊದಲನೆ ಅಲೆಯ ಸಂದರ್ಭದಲ್ಲಿಯೇ ವಿರೋಧ ಪಕ್ಷಗಳು ವಿಪತ್ತು ನಿರ್ವಹಣೆ ಎಂದು ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಆ ಮಹಾನ್ ಕಾರ್ಯ ಮಾಡುವ ಮನಸ್ಸು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು. ಆದರೆ, ಏಪ್ರೀಲ್ ತಿಂಗಳಿನಲ್ಲಿ ಕೊರೊನಾ ಅಲೆಯನ್ನು ವಿಪತ್ತು ಎಂದು ಘೋಷಿಸಿದ್ದಾರೆ. ಆದರೆ, ಪರಿಹಾರ ವಿಷಯವನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಬಡವರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಎಚ್ ಕೆ ಪಾಟೀಲ ಮನವಿ ಮಾಡಿದರು.

ಪರಿಹಾರ ಕೊಡಿ

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಕೊಡಲಾಗುವುದಿಲ್ಲ. ಎಸ್‌ಡಿಆರ್‌ಎಫ್‌ನಿಂದ ಹಣ ಕೊಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಎತ್ತಿ ಹಾಕಿದ್ದಾರೆ. ನೀವು ಎಲ್ಲಿಂದಾದರೂ ಕೊಡಿ, ಕೋವಿಡ್‌ನಿಂದ ಮರಣ ಹೊಂದಿದವರಿಗೆ ರೂ. 5 ಲಕ್ಷ ಹಣವನ್ನು ತಕ್ಷಣವೇ ಪರಿಹಾರವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ 35ರಿಂದ 50 ವರ್ಷದೊಳಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದರೆ, ಅಂತಹ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದರೆ, ಆ ಕುಟುಂಬಕ್ಕೆ ರೂ. 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದಾರೆ. ಆದರೆ, ಇವರು ಪರಿಹಾರ ಮೊತ್ತವನ್ನು ಏಕೆ ಕಡಿಮೆ ಮಾಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ.

3.28 ಲಕ್ಷ ಸಾವು

ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂಕಿ-ಸಂಖ್ಯೆಗಳನ್ನು ಮರೆ ಮಾಚುವ ಕೆಲಸ ಮಾಡುತ್ತಿದೆ. ಎರಡನೇ ಅಲೆಯಲ್ಲಿ ಜೂ. 14ರೊಳಗಾಗಿ ರಾಜ್ಯದಲ್ಲಿ 33,033 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮೊದಲನೇ ಅಲೆಯಲ್ಲಿ 23 ಸಾವಿರದಷ್ಟು ಜನ ಸಾವನ್ನಪ್ಪಿದ್ದರು. ಆದರೆ, ಈ ಅಂಕಿ-ಸಂಖ್ಯೆ ಸುಳ್ಳು. ರಾಜ್ಯದಲ್ಲಿ ಜೂ. 14ರೊಳಗೆ 3,27,988 ಸಾವುಗಳು ಕೊರೊನಾದಿಂದ ಸಂಭವಿಸಿವೆ.

ಕೊರೊನಾದಿಂದ ಸತ್ತವರ ಅಂಕಿ-ಸಂಖ್ಯೆ ಮರೆಮಾಚುವುದು ಮಾನವೀಯತೆ, ಮನುಷ್ಯತ್ವದ ಲಕ್ಷಣವಲ್ಲ. ಯಾವ ಕಾರಣಕ್ಕಾಗಿ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ? ಮರಣದ ಮಾಸಿಕ ವರದಿಗಳನ್ನು ಹಾಗೂ ಮೆಡಿಕಲ್ ಕಾಲ್ ಆಫ್ ಡೆತ್ ಸುದ್ದಿಗಳನ್ನು ಪ್ರಕಟಿಸುವುದನ್ನೇ ಸರ್ಕಾರ ನಿಲ್ಲಿಸಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here