ಬೊಗೋಟಾ: ಬುಧವಾರ ಕೊಲಂಬಿಯಾ–ವೆನೆಜುವೆಲಾ ಗಡಿ ಸಮೀಪ ಭೀಕರ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ 13 ಪ್ರಯಾಣಿಕರು ಹಾಗೂ 2 ಸಿಬ್ಬಂದಿ ಸೇರಿ ಒಟ್ಟು 15 ಮಂದಿ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಅಧಿಕೃತವಾಗಿ ದೃಢಪಡಿಸಿದೆ.
ಸರ್ಕಾರಿ ವಿಮಾನಯಾನ ಸಂಸ್ಥೆ SATENA ನಿರ್ವಹಿಸುತ್ತಿದ್ದ Beechcraft 1900 ಟ್ವಿನ್ ಪ್ರೊಪೆಲ್ಲರ್ ವಿಮಾನವು ಗಡಿ ನಗರ ಕುಕುಟಾದಿಂದ ಹೊರಟು, ಸಮೀಪದ ಓಕಾನಾ ನಗರದಲ್ಲಿ ಲ್ಯಾಂಡ್ ಆಗುವಾಗ ನಿಯಂತ್ರಣ ತಪ್ಪಿ ಪತನಗೊಂಡಿದೆ.
ಅಪಘಾತದ ಬಳಿಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಕೊಲಂಬಿಯಾ ಚೇಂಬರ್ ಆಫ್ ಡೆಪ್ಯೂಟೀಸ್ನ ಸದಸ್ಯರಾದ ಸಂಸದ ಡಿಯೊಜಿನೆಸ್ ಕ್ವಿಂಟೆರೊ, ಜೊತೆಗೆ ಮುಂಬರುವ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಕಾರ್ಲೋಸ್ ಸಾಲ್ಸೆಡೋ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಸಂಭವಿಸಿದ ಪ್ರದೇಶವು ಪರ್ವತಮಯವಾಗಿದ್ದು, ಹವಾಮಾನವೂ ಅತಿಯಾಗಿ ಬದಲಾಗುವ ಸ್ವಭಾವ ಹೊಂದಿದೆ. ಅಲ್ಲದೆ, ಈ ಭಾಗವು ELN ಗೆರಿಲ್ಲಾ ಸಂಘಟನೆ ನಿಯಂತ್ರಣದಲ್ಲಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಗಳು ಎದುರಾದವು.
ವಿಮಾನ ಅವಶೇಷ ಪತ್ತೆ ಹಾಗೂ ಮೃತದೇಹಗಳ ವಾಪಸ್ಸಿಗಾಗಿ ಕೊಲಂಬಿಯಾ ಸರ್ಕಾರ ವಾಯುಪಡೆಯನ್ನು ನಿಯೋಜಿಸಿದ್ದು, ದುರಂತದ ನಿಖರ ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.



