ವಿಜಯಸಾಕ್ಷಿ ಸುದ್ದಿ, ಗದಗ
ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ 2017 ಜುಲೈ 29ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಗೋಣೆಪ್ಪ ಗುಡದರ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ನ್ಯಾ. ರಾಜಶೇಖರ ಪಾಟೀಲ ತೀರ್ಪು ಹೊರಡಿಸಿದ್ದಾರೆ.
ಕಟ್ಟಡ ಕಾರ್ಮಿಕನಾಗಿದ್ದ ಪರಶುರಾಮ ಗುಡದರ, ಅಣ್ಣಪ್ಪ ಗಜಕೋಶ ಮತ್ತು ಆತನ ಚಿಕ್ಕಪ್ಪ ಸೋಮನಾಥ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮನಾಥ ಮದ್ಯ ಸೇವನೆ ಮಾಡಿದಾಗಲೆಲ್ಲಾ ಪರಶುರಾಮ ಗುಡದರ ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಲ್ಲದೇ ಆತನ ಬಳಿಯಿದ್ದ ಹಣವನ್ನು ಕಿತ್ತುಕೊಳ್ಳುತ್ತಿದ್ದ.
2017 ಜುಲೈ 29ರಂದು ಪರಶುರಾಮ, ಸೋಮನಾಥ ಕಿಸೆಯಿಂದ 120ರೂ. ಕಿತ್ತುಕೊಂಡಿದ್ದ. ಈ ವಿಷಯವನ್ನು ಸೋಮನಾಥ ಮತ್ತು ಅಣ್ಣಪ್ಪ ಸೇರಿಕೊಂಡು ಓಣಿಯ ಹಿರಿಯರಿಗೆ ತಿಳಿಸಿದ್ದರು. ಇದರಿಂದ ಸಿಟ್ಟಾದ ಪರಶುರಾಮ, ಓಣಿಯ ಹಿರಿಯರು ಕರೆಯುತ್ತಿದ್ದಾರೆ ಬನ್ನಿ ಎಂದು ಸೋಮನಾಥ ಮತ್ತು ಅಣ್ಣಪ್ಪನನ್ನು ಪುಸಲಾಯಿಸಿಕೊಂಡು, ಅಗಸ್ತ್ಯ ತೀರ್ಥದ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರಿಗೂ ಅವಾಚ್ಯ ಶಬ್ಧಗಳಿಂದ ಬೈದಾಡಿ, ಕಲ್ಲಿನಿಂದ ಸೋಮನಾಥನ ತಲೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಅಣ್ಣಪ್ಪನಿಗೆ ಬೆದರಿಕೆಯೊಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬೆದರಿಕೆ ಮಧ್ಯೆಯೂ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ತನಿಖೆ ನಡೆದು ಪರಶುರಾಮ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದಾರೆ.