ವಿಜಯಸಾಕ್ಷಿ ಸುದ್ದಿ, ಕೊಡಗು
ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಸೋಂಕಿತನಿಂದ ಅವಾಂತರ ಸೃಷ್ಟಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಾನು ಗುಣಮುಖನಾಗದಿದ್ದರೂ ಮಡಿಕೇರಿ ಕೋವಿಡ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಿಂದ ಕಳುಹಿಸುತ್ತಿಲ್ಲ ಎಂದು ಬೇಸರಗೊಂಡ ಕೊರೊನಾ ಸೋಂಕಿತ ಅರೆಕಾಡು ಮೂಲದ ವ್ಯಕ್ತಿಯೊಬ್ಬ ಆಸ್ಪತ್ರೆಯಿಂದ ನಿನ್ನೆ ಪರಾರಿಯಾಗಿದ್ದ.
ರೋಗಿ ತಪ್ಪಿಸಿಕೊಂಡಿರುವ ಕುರಿತು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿಗಳು ದೂರು ನೀಡಿ ಆತನ ಪತ್ತೆಗಾಗಿ ಮನವಿ ಮಾಡಿದ್ದರು. ಆದರೆ, ಇಂದು ಬೆಳಿಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿದ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ಅಂಬ್ಯುಲೆನ್ಸ್ ತರಿಸಿದ್ದಾರೆ. ಪೊಲೀಸ್ ಠಾಣೆಗೆ ಅ್ಯಂಬುಲೆನ್ಸ್ ಬರುತ್ತಿರುವಂತೆಯೇ ಅಲ್ಲಿಂದಲೂ ಓಟಕಿತ್ತ ಸೋಂಕಿತ ವ್ಯಕ್ತಿ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾನೆ.
ಈತನ ಹುಡುಕಾಟಕ್ಕಾಗಿ ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕೆಲವು ಗಂಟೆಗಳ ಬಳಿಕ ಕೋವಿಡ್ ಸೋಂಕಿತ ತನ್ನ ಪರಿಚಿತರ ಬೈಕ್ ಮೂಲಕ ವಿರಾಜಪೇಟೆ ಬಳಿ ಸಾಗುತ್ತಿರುವ ಮಾಹಿತಿ ದೊರಕಿತು. ಅಲ್ಲಿಗೆ ತೆರಳಿದ ಪೊಲೀಸರು ಈತನನ್ನು ಸುತ್ತುವರಿದು ಕೊನೆಗೂ ಓಡಿಹೋಗದಂತೆ ತಡೆಯುವಲ್ಲಿ ಸಫಲರಾಗಿದ್ದಾರೆ. ಸದ್ಯ ಅ್ಯಂಬುಲೆನ್ಸ್ ಮೂಲಕ ಸೋಂಕಿತ ವ್ಯಕ್ತಿಯನ್ನು ಮತ್ತೆ ಕೋವಿಡ್ ಕೇರ್ ಕೇಂದ್ರಕ್ಕೆ ಕರೆತಂದು ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಯು ಆಸ್ಪತ್ರೆಯಿಂದ ಪರಾರಿಯಾಗಿ ಪೊಲೀಸರೂ ಪರದಾಡುವಂತೆ ಮಾಡಿದ್ದ ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ.