ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಸೇರಿದಂತೆ ಹತ್ತು ಹಲವು ನಿರ್ಬಂಧಗಳನ್ನು ಹೇರಿದೆ. ಜಿಲ್ಲಾಧಿಕಾರಿಗಳು ಕೂಡ ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಪೂಜೆ-ಪುನಸ್ಕಾರ ಮಾಡಬೇಕು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶ ಕೊಡಬಾರದು ಎಂದು ಆದೇಶ ಹೊರಡಿಸಲಾಗಿದೆ.
ಹೀಗೆ ಭಕ್ತರ ಕೋರಿಕೆಯ ಮೇರೆಗೆ ದೇವಸ್ಥಾನದ ಬಾಗಿಲು ತಗೆದು ದರ್ಶನಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ.
ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಿನ್ನೆ ಗ್ರಾಮದಲ್ಲಿ ಆಚರಿಸುವ ಕೊನೆ ಮಂಗಳವಾರದ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮೂರು ಜನ ಅರ್ಚಕರನ್ನು ಬಂಧಿಸಿದ್ದಾರೆ.
ಫಕ್ಕೀರಪ್ಪ ಚನ್ನಪ್ಪ ಬಾರಕೇರ, ಚನ್ನಪ್ಪ ಫಕ್ಕೀರಪ್ಪ ಬಾರಕೇರ ಹಾಗೂ ಸಂತೋಷ ಫಕ್ಕೀರಪ್ಪ ಬಾರಕೇರ ಎಂಬುವವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ನಾಗಾವಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಣೇಶ ಹನಮಪ್ಪ ಪೂಜಾರ ಎಂಬುವವರು ದೂರು ದಾಖಲು ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.