ವಿಜಯಸಾಕ್ಷಿ ಸುದ್ದಿ, ರಾಯಚೂರು
ಕೊರೊನಾ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖವಾದ ಮೂರ್ನಾಲ್ಕು ವಾರಗಳ ನಂತರ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್ಎವಲ್ಎಸಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಆದರೆ, ಎಚ್ ಎಲ್ ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗುವನ್ನು ವೈದ್ಯರು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತ ಆ ಮಗು ಗುಣಮುಖವಾಗಿದೆ ಅಂತ ಮಾಹಿತಿ ನೀಡಿದೆ.
ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ. ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ತೊಂದೆಯಾಗಿದೆ.
ವಿಪರೀತ ಜ್ವರ, ವಾಂತಿ ಬೇಧಿ, ಹೊಟ್ಟೆನೋವು ಇದರ ಪ್ರಮುಖ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.