ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸಿ; ಜಿಲ್ಲಾ ಮಂತ್ರಿ ನೇತೃತ್ವದಲ್ಲಿ ಕೊಪ್ಪಳ ಶಾಸಕ, ಸಂಸದರಿಂದ ಸಿಎಂಗೆ ಪ್ರಸ್ತಾವನೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ವಿಶ್ವ‌ವಿದ್ಯಾಲಯ ಸ್ಥಾಪಿಸಬೇಕು ಎಂದು ಕೊಪ್ಪಳ‌ ಜಿ‌ಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಶಾಸಕ, ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದರು.

Advertisement

ಗಂಗಾವತಿ ತಾಲೂಕು ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ. ಅಲ್ಲದೇ ಜಿಲ್ಲೆಯ ಕೃಷಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ.

ಜಿಲ್ಲೆಯಲ್ಲಿ ಎರಡು ಕೃಷಿ ಸಂಶೋಧನಾ ಕೇಂದ್ರಗಳು, ಒಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಒಂದು ಕೃಷಿ ವಿಜ್ಞಾನ ಕೇಂದ್ರವಿದ್ದು, ಒಟ್ಟು 19 ವಿಜ್ಞಾನಿಗಳು ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕೃಷಿ‌ ವಿವಿ ಸ್ಥಾಪನೆಗೆ ಬೇಕಾದ ಎಲ್ಲಾ ಅನುಕೂಲತೆ ಇದೆ. ಕೃಷಿಗೆ ಪೂರಕವಾದ ವಾತಾವರಣವನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ‌ ವಿವಿ ಅಗತ್ಯವಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಪದವಿ ಹೊಂದಲು 140 ಕಿ.ಮೀ. ದೂರದ ರಾಯಚೂರು ಇಲ್ಲವೇ 220 ಕಿ.ಮೀ ದೂರದ ಧಾರವಾಡಕ್ಕೆ ಹೋಗಬೇಕಿದೆ. ಇದರಿಂದ ಕೃಷಿ ಪದವಿ ತಂತ್ರಜ್ಞಾನ ಸಂಬಂಧ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಕೊಪ್ಪಳದಲ್ಲಿಯೇ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿವಿ ಸ್ಥಾಪಿಸಲು ಬೇಕಾದ ಭೂಪ್ರದೇಶ ಹಾಗೂ ನೀರಾವರಿ ಸೌಲಭ್ಯವಿರುತ್ತದೆ. ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅಗತ್ಯವಾದ ಪ್ರಯೋಗಾಲಯಗಳು, ವಸತಿ ನಿಲಯ, ವಡ್ಡರಹಟ್ಟಿ ಕ್ಯಾಂಪ್ ಡಿಎಟಿಸಿಯಲ್ಲಿ ಲಭ್ಯವಿದ್ದು, ಇವುಗಳನ್ನು ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅವಶ್ಯಕತೆಯಿದ್ದಲ್ಲಿ ಬಳಸಿಕೊಳ್ಳಬಹುದಾಗಿದೆ.

ಅಲ್ಲದೇ ಗಂಗಾವತಿ ನಗರವು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರೈಲು ಹಾಗೂ ಸಾರಿಗೆ ಸಂಪರ್ಕವನ್ನೂ ಸಹ ಹೊಂದಿದೆ. ಇಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿ ಹಾಗೂ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಬಿ.ಸಿ.ಪಾಟೀಲರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಸ್ತಾವನೆ ಸಲ್ಲಿಕೆಗೂ ಮುನ್ನ ವಿಕಾಸಸೌಧದ ಕೃಷಿ ಮಂತ್ರಿಗಳ ಕಚೇರಿಯಲ್ಲಿ ಕೃಷಿ ವಿವಿ ಸ್ಥಾಪನೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೆಸುಗೂರ, ಪರಣ್ಣ ಮನವಳಿ ಇದ್ದರು.


Spread the love

LEAVE A REPLY

Please enter your comment!
Please enter your name here