ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಅನ್ ಲಾಕ್ ಮಾಡಿ ಆದೇಶ ಹೊರಡಿಸಿದೆ. ಈ ಸಾಲಿಗೆ ಗದಗ ಜಿಲ್ಲೆ ಕೂಡ ಇದ್ದು, ಜೂ. 14ರಿಂದ ಅನ್ ಲಾಕ್ ಆಗಲಿದೆ.
ಸರ್ಕಾರ ಇಲ್ಲಿಯವರೆಗೆ ಶೇ. 5ರಷ್ಟು ಪಾಸಿಟಿವಿಟಿ ಬಂದರೆ ಮಾತ್ರ ಲಾಕ್ ಡೌನ್ ತೆರವುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ, ತಾಲೂಕುವಾರು ಗಮನಿಸದೆ, ಜಿಲ್ಲಾವಾರು ಸೋಂಕಿತರ ಸಂಖ್ಯೆ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿದೆ. ಅಲ್ಲದೇ, ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿದೆ.
ಗದಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳನ್ನು ನೋಡುವುದಾದರೆ ಗದಗ ತಾಲೂಕಿನಲ್ಲಿ ಶೇ. 4.41, ರೋಣ ಶೇ. 3.28, ಮುಂಡರಗಿ ಶೇ. 2.81, ಶಿರಹಟ್ಟಿಯಲ್ಲಿ ಶೇ. 4.47ರಷ್ಟು ಪಾಸಿಟಿವಿಟಿ ದರವಿದೆ. ಆದರೆ, ನರಗುಂದ ತಾಲೂಕಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ. ಅಲ್ಲಿ ಶೇ. 5.75ರಷ್ಟು ಪಾಸಿವಿಟಿ ದರ ಹೆಚ್ಚಾಗಿದೆ.

ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳನ್ನು ಗಮನಿಸುವಾದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಶೇ. 2.46 ರಷ್ಟು ಪಾಸಿಟಿವಿಟಿ ದರ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶೇ. 5.76ರಷ್ಟು, ಕುಷ್ಟಗಿಯಲ್ಲಿ ಶೇ. 10.34ರಷ್ಟು, ಯಲಬುರ್ಗಾದಲ್ಲಿ ಶೇ. 5.1ರಷ್ಟು, ಕೊಪ್ಪಳ ತಾಲೂಕಿನಲ್ಲಿ ಶೇ. 4.8ರಷ್ಟು, ಹಡಗಲಿಯಲ್ಲಿ ಶೇ. 6.77ರಷ್ಟು, ಹಾವೇರಿ ತಾಲೂಕಿನಲ್ಲಿ ಶೇ. 2.6ರಷ್ಟು, ಸವಣೂರ ತಾಲೂಕಿನಲ್ಲಿ ಶೇ. 2.5ರಷ್ಟು ಪಾಸಿಟಿವಿಟಿ ದರವಿದೆ. ಸರ್ಕಾರ ಅನ್ ಲಾಕ್ ಮಾಡಿದೆ ಎಂದು ಜಿಲ್ಲೆಯ ಜನ ಮೈಮರತೆರೆ ಸುತ್ತಮುತ್ತಲಿನ ತಾಲೂಕಿನಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.