ಗದಗ ಜಿಲ್ಲೆಯ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಸಮೀಕ್ಷೆ

0
Spread the love

ಆರ್‌ಡಿಪಿಆರ್‌ನಿಂದ ಯಾದಗಿರಿ, ಗದಗ ಜಿಲ್ಲೆಯ ಮಕ್ಕಳ ಅಪೌಷ್ಟಿಕತೆ ಕುರಿತು ಅಧ್ಯಯನ

Advertisement

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೇಂದ್ರ ಸರ್ಕಾರ ಶಾಲಾ ಮಕ್ಕಳಲ್ಲಿನ ಪೌಷ್ಟಿಕಾಂಶ ವೃದ್ಧಿಸಲು, ಕಲಿಕೆಯ ಪ್ರಮಾಣ ಹೆಚ್ಚಾಗಬೇಕು, ಮಕ್ಕಳು ಹೆಚ್ಚು ಶಕ್ತಿಯುತವಾಗಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲಾಗುತ್ತಿದೆ. ತಜ್ಞರ ಪ್ರಕಾರ 8-15 ವಯಸ್ಸಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ ಎಂಬ ಕಾರಣದಿಂದಾಗಿ ರಾಜ್ಯ ಸರ್ಕಾರ ಹೊಸ ಪ್ರಯೋಗ ನಡೆಸಿದೆ.

ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುತ್ತಿದೆ. ಗದಗ ಜಿಲ್ಲೆಗೂ ಯೋಜನೆ ವಿಸ್ತರಿಸುವಂತೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಯಾದಗಿರಿ, ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಅಧ್ಯಯನ ಕೈಗೊಂಡಿದೆ.

ಯಾದಗಿರಿ ಅಧ್ಯಯನ ಜಿಲ್ಲೆ

ಶಾಲಾ ಮಕ್ಕಳು ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿರುವ ಯಾದಗಿರಿಯನ್ನು ಅಧ್ಯಯನ ಜಿಲ್ಲೆಯನ್ನಾಗಿ ಆಯ್ಕೆ ಮಾಡಿದೆ. ಅದರಂತೆ ಗದಗವನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿರುವ ವಿಶ್ವವಿದ್ಯಾಲಯವು ಎರಡೂ ಜಿಲ್ಲೆಗಳ 60 ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಆರೋಗ್ಯದ ಸ್ಥಿತಿಗತಿ, ರಕ್ತಹೀನತೆ, ಎತ್ತರ, ತೂಕ ಮತ್ತಿತರ ಅಂಶಗಳನ್ನು ಇಟ್ಟುಕೊಂಡು ಮೂಲ ಸಮೀಕ್ಷೆ ನಡೆಸಿ ಪೂರ್ಣಗೊಳಿಸಿದೆ.

ವಿಶ್ವವಿದ್ಯಾಲಯದ ಒಟ್ಟು 80 ವಿದ್ಯಾರ್ಥಿಗಳು, 10ಕ್ಕೂ ಹೆಚ್ಚು ಅಧ್ಯಾಪಕರು ಸಮೀಕ್ಷೆ ನಡೆಸಿದ್ದು, ಸೆಂಟರ್ ಫಾರ್ ರಿಸರ್ಚ್ ಇನೋವೇಶನ್ ಆಂಡ್ ಇವ್ಯಾಲುವೇಶನ್‌ನ ಸಹಾಯಕ ನಿರ್ದೇಶಕ ಗಿರೀಶ್ ದೀಕ್ಷಿತ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆದಿದೆ.

ಗದಗ ಕಂಟ್ರೋಲ್ ಜಿಲ್ಲೆ

ಮಧ್ಯಾಹ್ನದ ಊಟದ ಜೊತೆಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡಲಾಗುತ್ತಿದೆ. ಅಲ್ಲದೆ, ಮಕ್ಕಳಲ್ಲಿ ಪೌಷ್ಟಿಕಾಂಶ ಬೆಳೆಸಲಿಕ್ಕೆ ಸಹಕಾರಿಯಾಗಲಿದೆ ಎಂಬ ಕಾರಣಕ್ಕಾಗಿ ಡಿ. 1ರಿಂದಲೇ ಈ ಯೋಜನೆ ಜಾರಿಗೆ ಬಂದಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ದೃಷ್ಟಿಯಿಂದ ರಾಜ್ಯದ ಶೈಕ್ಷಣಿಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಅಧ್ಯಯನದ ಜವಾಬ್ದಾರಿ ನೀಡಿದ್ದರು.

ವಿಶ್ವವಿದ್ಯಾಲಯವು ಒಂದು ತಿಂಗಳಿಂದ ಎಲ್ಲ ಸಿದ್ಧತೆ ನಡೆಸಿ, ಅಧ್ಯಾಪಕರು, ತಜ್ಞರು, ವಿದ್ಯಾರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಮೂಲ ಸಮೀಕ್ಷೆ ಮಾಡಿದ್ದಾರೆ. ಇದರೊಂದಿಗೆ ವಾಸ್ತವಿಕ ಅಂಶವನ್ನು ಅರ್ಥೈಸಿಕೊಳ್ಳುವ ಸಲುವಾಗಿ ಗದಗವನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಎರಡೂ ಜಿಲ್ಲೆಗಳಲ್ಲಿ ಮೂಲ ಸಮೀಕ್ಷೆ ಮುಕ್ತಾಯಗೊಂಡಿದೆ.

4500 ವಿದ್ಯಾರ್ಥಿಗಳ ಸಮೀಕ್ಷೆ

ಯಾದಗಿರಿ, ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸೇರಿ ಪ್ರತಿ ಜಿಲ್ಲೆಯಲ್ಲೂ 30 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. 4500 ವಿದ್ಯಾರ್ಥಿಗಳಲ್ಲಿ ಅವರ ಆಹಾರ-ವಿಹಾರ ಪದ್ಧತಿ, ಊಟ ವ್ಯವಸ್ಥೆ, ವ್ಯಕ್ತಿಗತ ಮಾಹಿತಿ, ಆರೋಗ್ಯ ಸ್ಥಿತಿಗತಿ ಸೇರಿ ಇತರ ಮಾಹಿತಿಗಳನ್ನು ದಾಖಲಿಸುವ ಮೊದಲ ಹಂತದ ಸಮೀಕ್ಷಾ ಕಾರ್ಯ ಮುಗಿದಿದೆ. ಇದರ ಅನಂತರ ಮಿಡ್‌ಲೈನ್ ಪ್ರಾಸೆಸ್ ರಿವ್ಯಾಲ್ಯೂವೇಶನ್ ಮಾಡಲಾಗುತ್ತದೆ. ಬಳಿಕ 2022 ಮಾರ್ಚ್‌ನಲ್ಲಿ ಅಂತಿಮ ಸಮೀಕ್ಷೆ ನಡೆಸಿ ಅಧ್ಯಯನದ ಸಂಪೂರ್ಣ ದತ್ತಾಂಶವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಅವರು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡಿದ ಅಧ್ಯಯನದ ಜವಾಬ್ದಾರಿಯನ್ನು ಸಮರ್ಪಕ, ಸಮರ್ಥ ಹಾಗೂ ಬಹಳ ವಿಶ್ವಾಸದಿಂದ ವಿದ್ಯಾರ್ಥಿ ಅಧ್ಯಾಪಕರು ಮಾಡಿದ್ದಾರೆ.

ವಿಷ್ಣುಕಾಂತ ಚಟಪಲ್ಲಿ, ಕುಲಪತಿ

ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಾತ್ರವೇ ಮೊಟ್ಟೆ ನೀಡಲಾಗುತ್ತಿದೆ. ಗದಗನ್ನು ಕಂಟ್ರೋಲ್ ಜಿಲ್ಲೆಯನ್ನಾಗಿ ಆಯ್ದುಕೊಂಡು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಅದರಂತೆ, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿವರೆಗಿನ ಒಟ್ಟು 1.43 ಲಕ್ಷ ಮಕ್ಕಳು ಬಿಸಿಯೂಟ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮಂಗಳಾ ತಾಪಸ್ಕರ್, ಅಕ್ಷರ ದಾಸೋಹ

Spread the love

LEAVE A REPLY

Please enter your comment!
Please enter your name here