ವಿಜಯಸಾಕ್ಷಿ ಸುದ್ದಿ, ಗದಗ
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2021-22 ಕ್ಕೆ ಸಂಬಂಧಿಸಿದಂತೆ, ಗದಗ-ಬೆಟಗೇರಿ ನಗರಸಭೆ ಮತದಾರ ಪಟ್ಟಿ ತಯಾರಿಸುವ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಗಳನ್ನು ಸಿದ್ದಪಡಿಸುವ ಕುರಿತು ಆಯೋಗವು ನೀಡಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 4 ರಂದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಸದರಿ ಮತದಾರ ಪಟ್ಟಿಗಳು ಮತದಾರರ ಪರಿಶೀಲನೆಗಾಗಿ ಗದಗ-ಬೆಟಗೇರಿ ನಗರಸಭೆ, ತಹಶೀಲ್ದಾರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ವೆಬ್ ಸೈಟ್ www.gadag.nic.in ನಲ್ಲಿ ಪರಿಶೀಲನೆಗೆ ಲಭ್ಯವಿರುತ್ತವೆ.
ಸದರಿ ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಹೆಸರು ತಾವು ವಾಸವಿರುವ ವಾರ್ಡಿನ ವ್ಯಾಪ್ತಿಯಲ್ಲಿ ಇರದೆ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಹಾಗೂ ಗ್ರಾಮೀಣ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸಂಬಂಧಿಸಿದ ಗದಗ ತಾಲೂಕಿನ ಗೊತ್ತುಪಡಿಸಿದ ಅಧಿಕಾರಿಯಾದ ತಹಶೀಲ್ದಾರ, ಗದಗ ಇವರಿಗೆ ಅಕ್ಟೋಬರ್ 11 ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.