ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ
ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ತೀವ್ರ ಪೈಪೋಟಿ
ವಿಜಯಸಾಕ್ಷಿ ವಿಶೇಷ, ಗದಗ
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಡಿ. 8ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ. ಎಂಟು ವರ್ಷಗಳ ಬಳಿಕ ಅವಳಿ ನಗರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಜರಗುತ್ತಿರುವುದರಿಂದ ಕದನ ಕುತೂಹಲ ಕೆರಳಿಸಿದೆ.

ಟಿಕೆಟ್‌ಗಾಗಿ ಹೆಸರು ನೋಂದಾಯಿಸಿರುವ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಭಾವಿ ರಾಜಕೀಯ ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಪಕ್ಷಗಳಲ್ಲಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಬಂಡಾಯ ಅಭ್ಯರ್ಥಿಗಳಾಗಿಯಾದರೂ ಚುನಾವಣೆ ಕಣಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದಾರೆ. ಇದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಧಾನ ಪರಿಷತ್ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಅವಳಿ ನಗರದ 35 ವಾರ್ಡ್‌ಗಳಲ್ಲೂ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಮಾರುದ್ಧವಿದೆ. ಉಭಯ ಪಕ್ಷಗಳಲ್ಲೂ ಆಕಾಂಕ್ಷಿಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲಿದ್ದು, ಅಳಿದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವಲ್ಲಿ ಮಗ್ನರಾಗಿದ್ದಾರೆ.
ಬಿಜೆಪಿ ಟಿಕೆಟ್‌ಗಾಗಿ 210 ಜನರು ಅರ್ಜಿ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ 110 ಜನರು ಟಿಕೆಟ್ ನೀಡುವಂತೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಅರ್ಜಿ ಸಲ್ಲಿಸಿರುವರಲ್ಲಿ ಯುವ ಜನತೆಯೇ ಹೆಚ್ಚಿದ್ದಾರೆ ಎನ್ನಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಸುಮ್ಮನೆ ಕುಳಿತುಕೊಳ್ಳದೆ ಟಿಕೆಟ್‌ಗಾಗಿ ನಾಯಕರ ಮನೆಗೆ ಅಲೆದಾಡುತ್ತಿದ್ದಾರೆ. ಪಕ್ಷದಲ್ಲಿ ಪ್ರಭಾವಿ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅವಳಿ ನಗರದ 22ನೇ ವಾರ್ಡ್ ಗಂಗಿಮಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ 11 ಜನರು ಪೈಪೋಟಿ ನಡೆಸುತ್ತಿರುವುದು ವಿಶೇಷ.
ಅನಿಲ್ ಪ್ರಭಾವದ ನಿರೀಕ್ಷೆ
ಗದಗ ಮತಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಬಹುತೇಕ ಗದಗ-ಬೆಟಗೇರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಬಂದಿದೆ. 2007ರಲ್ಲಿ ಮಾತ್ರ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಅವಳಿ ನಗರದಲ್ಲಿ ಕಾಂಗ್ರೆಸ್ ಸಂಪೂರ್ಣ ಹಿಡಿತ ಸಾಧಿಸಿದ್ದರೂ ಗದಗ ಮತಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರು ಅವಳಿ ನಗರದ 28 ವಾರ್ಡ್‌ಗಳಲ್ಲಿ ಪಡೆದಿರುವ ಮತಗಳು ಬಿಜೆಪಿ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ. ಬಿಜೆಪಿ ನಾಯಕರೂ ಇದೇ ಲೆಕ್ಕಾಚಾರಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟು ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಉಭಯ ಪಕ್ಷಗಳಿಗೆ ಪೈಪೋಟಿ ನೀಡಲು ಜೆಡಿಎಸ್ ಹವಣಿಸುತ್ತಿದೆ.
ಯಾರಿಗೆ ಅದೃಷ್ಟ?
ಈ ಬಾರಿ ನಗರಸಭೆಯ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ಹಪಾಹಪಿಸುತ್ತಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಆಪರೇಷನ್ ಕಮಲ ಸಂಸ್ಕೃತಿ ಹುಟ್ಟು ಹಾಕಿರುವ ಬಿಜೆಪಿಯ ಕೆಲವು ಪ್ರಭಾವಿ ಆಕಾಂಕ್ಷಿಗಳಿಗೆ ಕಾಂಗ್ರೆಸ್ಸಿಗರು ಆಸೆ, ಆಮಿಷಗಳನ್ನೊಡ್ಡಿ ಹೈಜಾಕ್ ಮಾಡುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಗದಗ-ಬೆಟಗೇರಿ ನಗರಸಭೆಯ ಚುನಾವಣೆಗೂ ಮುನ್ನವೇ ‘ಆಯಾ ರಾಮ್ ಗಯಾ ರಾಮ್’ ಸಂಸ್ಕೃತಿ ಶುರುವಾಗಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಚುನಾವಣೆಯ ವೇಳೆ ಯಾವುದೇ ಮುಖಂಡರು ಪಕ್ಷಾಂತರ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದುತ್ವ ಪ್ರತಿಪಾದಕ ಶ್ರೀರಾಮಸೇನೆ ಬೆಂಬಲಿತ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇದರಿಂದಲೂ ಕೆಲವು ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಬಹುದು.
ಗದಗ-ಬೆಟಗೇರಿ ಚುನಾವಣೆ ಟಿಕೆಟ್ ನೀಡುವಂತೆ 200ಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಕನಿಷ್ಠ ಐವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಡುಗಡೆಗೊಳಿಸಲಾಗುವುದು. ಆಕಾಂಕ್ಷಿಗಳ ಸಂಘಟನಾ ಶಕ್ತಿ, ಗೆಲ್ಲಬಹುದಾದ ಸಾಮರ್ಥ್ಯ ಹೀಗೆ ಇನ್ನಿತರ ಹಲವು ಮಾನದಂಡಗಳನ್ನು ಇಟ್ಟುಕೊಂಡು ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು.
ಮೋಹನ್ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ
ಟಿಕೆಟ್‌ಗಾಗಿ 110 ಜನರು ಹೆಸರು ನೋಂದಾಯಿಸಿದ್ದು, ಡಿ.11ರಂದು ಆಯ್ಕೆ ಸಮಿತಿಯ ಸಭೆ ನಡೆಸಿ ಪ್ರತಿ ವಾರ್ಡ್‌ಗಳ ಮುಖಂಡರೊಂದಿಗೆ ಚರ್ಚಿಸಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಾಮಾಜಿಕ ನ್ಯಾಯದ ಆಧಾರದಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲಿನ ಪ್ರತಿ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುವುದು.
ಗುರುಣ್ಣ ಬಳಗಾನೂರ, ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ
ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ ಜೆಡಿಎಸ್ ಟಿಕೆಟ್‌ಗಾಗಿ 60ಕ್ಕೂ ಜನರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕೆಲ ಹಿರಿಯರು, ಕಾರ್ಯಕರ್ತರು ಸ್ಪರ್ಧಿಸಲು ಉತ್ಸಾಹ ತೋರಿದ್ದು, ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು.
ಅಂದಾನಯ್ಯ ಕುರ್ತಕೋಟಿಮಠ, ಜೆಡಿಎಸ್ ಜಿಲ್ಲಾಧ್ಯಕ್ಷ
ಬೆಟಗೇರಿಯ ಕೆಲ ಬಿಜೆಪಿಯ ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೈಜಾಕ್ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಬಿಜೆಪಿಯ ಮಾಜಿ ಸದಸ್ಯರ ಮನೆಗೆ ಹೋಗಿ ಪಕ್ಷಕ್ಕೆ ಕರೆ ತರಲು ಹರಸಾಹಸ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದ ಕೆಲ ಪ್ರಭಾವಿ ಮುಖಂಡರು ಕಾಂಗ್ರೆಸ್ ಪಕ್ಷ ಬಿಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ರೆ ಮುಸ್ಲಿಂ ಮುಖಂಡರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತದೆ. ಒಟ್ನಲ್ಲಿ ಆಯಾ ರಾಮ್, ಗಯಾ ರಾಮ್ ಆರಂಭವಾಗಿದ್ದುಂತೂ ಸತ್ಯ.