*ಮಹಾರಾಷ್ಟ್ರದಿಂದ ಬರುವ ಪ್ರಯಾಣಕರ ತಪಾಸಣೆ..
*ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಕಳ್ಳಮಾರ್ಗದಿಂದ ಪರಾರಿ.
ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ರೂಪಾಂತರಿ ವೈರಸ್ ‘ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರೈಲು ಮೂಲಕ ಗದಗ-ಬೆಟಗೇರಿ ಅವಳಿ ನಗರಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ.
ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಪ್ರಯಾಣಿಕರ ಆರ್‌ಟಿಪಿಸಿಆರ್ ವರದಿ ಪರಿಶೀಲಿಸುತ್ತಿದ್ದು, ಆರ್‌ಟಿಪಿಸಿಆರ್ ವರದಿ ಇಲ್ಲದಿರುವ ಪ್ರಯಾಣಿಕರಿಗೆ ರ‍್ಯಾಟ್ ಟೆಸ್ಟ್ ಮಾಡುತ್ತಿದ್ದ ದೃಶ್ಯ ಬುಧವಾರ ಗದಗ ರೈಲು ನಿಲ್ದಾಣದಲ್ಲಿ ಕಂಡು ಬಂದಿತು.
ದಿನವೊಂದಕ್ಕೆ ಮಹಾರಾಷ್ಟ್ರದಿಂದ ಗದಗ ನಗರಕ್ಕೆ 50ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುತ್ತಿದ್ದು, ಅದರಲ್ಲಿ ಕೇವಲ 20ರಿಂದ 30 ಜನರು ಮಾತ್ರ ಆರೋಗ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗುತ್ತಿದ್ದಾರೆ. ಪ್ರಯಾಣಿಕರು ಬರುವ ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿ ಇಲ್ಲದಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಪ್ರಯಾಣಿಕರು ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಪ್ರಯಾಣಿಕರ ಮನವೊಲಿಸುವುದು ಸವಾಲಿನ ಕೆಲಸವಾಗಿದೆ.
ಕೊರೊನಾ ತಪಾಸಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಕೆಲವು ಪ್ರಯಾಣಿಕರು ನಿಲ್ದಾಣದ ಮುಖ್ಯದ್ವಾರದಲ್ಲಿ ಬಾರದೆ ವಿವಿಧ ಮಾರ್ಗಗಳಿಂದ ರೈಲು ನಿಲ್ದಾಣದಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಮಹಾರಾಷ್ಟ್ರದಿಂದ ಬಹುತೇಕ ಪ್ರಯಾಣಿಕರು ಕೊರೊನಾ ನಕಾರಾತ್ಮಕ ವರದಿ ಇಲ್ಲದೆ ಅವಳಿ ನಗರಕ್ಕೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಯಾಣಿಕರು ಆರ್‌ಎಟಿ ಟೆಸ್ಟ್ ಮಾಡಿಸಿಕೊಳ್ಳದೆ, ನಗರದೊಳಗೆ ಪ್ರವೇಶಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಲಕ್ಷಣ ಇದ್ದಲ್ಲಿ ಪರೀಕ್ಷೆ
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರತಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಇದಕ್ಕಾಗಿ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋವಿಡ್ ಎರಡೂ ಹಂತದ ಲಸಿಕೆ ಪಡೆದಿದ್ದರೂ ಪ್ರತಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಕೊರೊನಾ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಂಥವರಿಗೆ ಸ್ಥಳದಲ್ಲಿಯೇ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ೧೫ ದಿನಗಳ ಒಳಗಾಗಿ ಚಿಕಿತ್ಸೆ ಪಡೆದಿರುವ ಗದಗ ಜಿಲ್ಲೆಯವರ ಬಗ್ಗೆ ಎಸ್‌ಡಿಎಂನ ವೈದ್ಯಕೀಯ ಅಧೀಕ್ಷಕರ ಬಳಿ ಮಾಹಿತಿ ಕೇಳಲಾಗಿದೆ. ಗುರುವಾರ ಸಂಜೆ ವೇಳೆಗೆ ಆರೋಗ್ಯ ಇಲಾಖೆಗೆ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಜಿಲ್ಲೆಯಲ್ಲಿ ಎಂಡಿಎಂ ಸಂಪರ್ಕ ಹೊಂದಿರುವವರು ಇದ್ದರೆ, ಅಂಥವರಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ್ ಬಸರಿಗಿಡದ ‘ವಿಜಯಸಾಕ್ಷಿ’ಗೆ ತಿಳಿಸಿದರು.
ಮೊದಲು ಮಾಸ್ಕ್ ಹಾಕ್ಕೊಳ್ಳಿ
ಬುಧವಾರ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರ ಟಿಕೆಟ್ ಪರಿಶೀಲಿಸಲು ಮುಂದೆ ಬಂದ ಟಿಕೆಟ್ ಕಲೆಕ್ಟರ್ ಒಬ್ಬರಿಗೆ ‘ಮೊದಲು ಮಾಸ್ಕ್ ಹಾಕಿಕೊಳ್ಳಿ ಬಳಿಕ ಟಿಕೆಟ್ ಪರಿಶೀಲಿಸಿ’ ಎಂದು ಪ್ರಯಾಣಿಕರೊಬ್ಬರು ಬುದ್ಧಿಮಾತು ಹೇಳಿದ ಪ್ರಸಂಗ ನಡೆಯಿತು.
ಮಹಾರಾಷ್ಟ್ರದಿಂದ ದಿನಕ್ಕೆ 40ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಆದರೆ, ನಮ್ಮ ಕೈಗೆ ಸಿಗುತ್ತಿರುವವರು, 20ರಷ್ಟು ಜನ ಮಾತ್ರ. ಇನ್ನುಳಿದವರು ಕೊರೊನಾ ಲಸಿಕೆ ಪಡೆದಿದ್ದರೂ, ಏಕೆ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ ಅಂತಾ ಹೆದರಿ ಬೇರೆ ಮಾರ್ಗಗಳಿಂದ ರೈಲು ನಿಲ್ದಾಣದಿಂದ ಹೊರಗೆ ಹೋಗುತ್ತಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿ