ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಜನಪ್ರಿಯ ಶೋ ಆಗಿರುವ ಬಿಗ್ ಹೌಸ್ ಸದ್ಯ ಬಾಗಿಲು ಮುಚ್ಚಿಕೊಂಡಿದೆ. ಬರೋಬ್ಬರಿ 71 ದಿನಗಳ ಕಾಲ ನಡೆದಿದ್ದ ಶೋ ಕೂಡ ರಾಜ್ಯದ ಲಾಕ್ ಡೌನ್ ನೊಂದಿಗೆ ಲಾಕ್ ಆಗಿದೆ. ಆದರೆ, ಹೊರ ಜಗತ್ತಿನ ಅರಿವಿಲ್ಲದಿದ್ದ ಬಿಗ್ ಬಾಸ್ ಸ್ಪರ್ಧಿಗಳು ವಿಷಯ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದಾರೆ.
ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿ ಬಿಗ್ ಬಾಸ್ ಮನೆ ಸೇರಿದ್ದ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತವಾಗಿತ್ತು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ದೂರ ಇದ್ದ ಇವರಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತದೆ ಎನ್ನುವ ಅರಿವೇ ಇಲ್ಲದಾಗಿತ್ತು. ಇವರ ಜೊತೆ ನೇರವಾಗಿ ಸುದೀಪ್ ಬಿಟ್ಟರೆ ಯಾರ ಸಂಪರ್ಕವೂ ಇರುವುದಿಲ್ಲ.
ಹೀಗೆ ಬಿಗ್ ಹೌಸ್ ನಲ್ಲಿ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿದ್ದ ಸ್ಪರ್ಧಿಗಳಿಗೆ 71ನೇ ದಿನ ಶಾಕ್ ಆಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಸುದ್ದಿಯನ್ನು ಆರಂಭದಲ್ಲಿ ಪ್ರಸಾರ ಮಾಡಲಾಯಿತು. ಆ ನಂತರ ಸಿಎಂ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ ತುಣುಕನ್ನು ಪ್ರಸಾರ ಮಾಡಲಾಯಿತು.
ಈ ಘೋಷಣೆಯ ಸುದ್ದಿ ಕೇಳುತ್ತಿದ್ದಂತೆ ಸ್ಪರ್ಧಿಗಳು ಗಾಬರಿಯಾದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತಾರೆ. ಇನ್ನು ಮೂರು ವಾರಗಳ ಕಾಲ ಮನೆಯಲ್ಲಿರಬಹುದು ಎಂಬ ಅವರ ಕನಸು ಕುಸಿದು ಬೀಳುತ್ತದೆ.
ಲಾಕ್ ಡೌನ್ ಘೋಷಣೆಯಾದ ಕಾರಣ, ಬಿಗ್ ಬಾಸ್ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಬಿಗ್ ಬಾಸ್ 8ನೇ ಅವೃತ್ತಿಯನ್ನು ವಾಹಿನಿ ನಿಲ್ಲಿಸಿದೆ. ಈ ಕುರಿತು ಮೇ. 8ರಂದು ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದರು. ಇದೀಗ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.