ವಿಜಯಸಾಕ್ಷಿ ಸುದ್ದಿ, ಗದಗ
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಇದಕ್ಕಾಗಿಯೇ ಗೋ ಸಂತತಿ ಸಂರಕ್ಷಣೆಯ ಸಲುವಾಗಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಬಳಿಕ ಇದೇ ಮೊದಲ ಬಾರಿಗೆ ದುರುಳರು ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗಾಯಗೊಳಿಸಿರುವ ಅಮಾನವೀಯ ಘಟನೆ ನಗರದ ರಾಧಾಕೃಷ್ಣನ್ ನಗರದ ಬಳಿ ನಡೆದಿದೆ.
ಮೂರು ಆಕಳುಗಳ ಬಾಲ ಕತ್ತರಿಸುವ ಮೂಲಕ ಕಿರಾತಕರು ವಿಕೃತಿ ಮೆರೆದಿದ್ದಾರೆ. ಇನ್ನು ಕೆಚ್ಚಲು (ಮೊಲೆ) ಜಾಗಕ್ಕೂ ಮಾರಕಾಸ್ತ್ರಗಳಿಂದ ಗಾಯಗೊಳಿಸಿದ್ದು, ಕಳೆದ ಮೂರು ದಿನಗಳಿಂದ ಕರು ತಾಯಿಯ ಹಾಲು ಕುಡಿಯಲಾಗದೇ ಪರದಾಡುತ್ತಿದೆ. ಇತ್ತ ಆಕಳು ಕೂಡಾ ನರಳಾಡುತ್ತಿದೆ.
ಆಕಳಿಗೆ ಹೆರಿಗೆ ಆಗಿ ಮೂರೇ ದಿನದಲ್ಲಿ ತಾಯಿ ಹಾಗೂ ಕರು ದೂರವಗಿದ್ದು, ಗೋವಿನ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಅಮಾನವೀಯ ಘಟನೆಯು ಗೋ ರಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.