ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ವಾಹನ ಸವಾರರನ್ನು ತಡೆದು ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ಬಂಧನ ಮಾಡುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿಯಲ್ಲಿ ರಾತ್ರಿ ವೇಳೆ ಶಿರಾಜ್ ಕೋಳೂರ ಹಾಗೂ ಆತನ ಸ್ನೇಹಿತರಿಗೆ ಮೂವರು ಸುಲಿಗೆಕೋರರು ಚಾಕುವಿನಿಂದ ಹೊಡೆದು, ಗನ್ ತೋರಿಸಿ ಕಳ್ಳತನ ಮಾಡಿಕೊಂಡ ಹೋದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಮೂವರು ಸುಲಿಗೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಸೆಟ್ಲಮೆಂಟ್ ನಿವಾಸಿ ಶ್ರೀನಿವಾಸ ತಿರುಪತಿ, ಸಿದ್ಧಾರ್ಥ್ ನವಲಗುಂದ, ಸುಧಾಕರ್ ಗಬ್ಬೂರ ಎಂಬುವವರೇ ಬಂಧಿತ ಆರೋಪಿಗಳು. ಇನ್ನೂ ಬಂಧಿತ ಆರೋಪಿಗಳಿಂದ ಒಂದು ಬುಲೆಟ್ ಬೈಕ್, 7,500ರೂ ನಗದು ಸೇರಿದಂತೆ ಒಂದು ಏರ್ ಗನ್, ಒಂದು ಕತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಬಂಧಿತ ಆರೋಪಿಯಲ್ಲಿ ಒಬ್ಬ ರೌಡಿಶೀಟರ್ ಆಗಿರುವುದು ತನಿಖೆಯ ನಂತರ ಬೆಳಕಿಗೆ ಬಂದಿದೆ.
ಇನ್ನೂ ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ರಾತ್ರಿಯಲ್ಲಿ ಹೈವೆ ಮೇಲೆ ನಿಂತು ರಾಬರಿ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಬಂಧನ ಮಾಡಲಾಗಿದೆ. ಮೂರು ಜನರ ಕಳ್ಳರ ಗ್ಯಾಂಗ್ ನಿಂದ ರಾಬರಿ ಮಾಡುತ್ತಿದ್ದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರ ಭಯಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.