-ತಲೆ ಕೆಳಗಾದ ಗ್ರಾಮಸ್ಥರ ಲೆಕ್ಕಾಚಾರ
ವಿಜಯಸಾಕ್ಷಿ ವಿಶೇಷ ಸುದ್ದಿ, ಗದಗ
ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಚಲಿ ಗ್ರಾ.ಪಂ. ವ್ಯಾಪ್ತಿಗೆ ಬರುವ ನೀಲಗುಂದ ಗ್ರಾಮಸ್ಥರು ಈ ಬಾರಿಯ ಗ್ರಾ.ಪಂ.ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ರು. ಯಾರೊಬ್ಬರೂ ನಾಮಪತ್ರ ಸಲ್ಲಿಸಬಾರದು ಎಂದು ತಾಕೀತು ಮಾಡಿದ್ದರು. ಅಲ್ಲದೇ, ಉಮೇದುವಾರಿಕೆ ಸಲ್ಲಿಸಿದರೆ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಗ್ರಾಮಸ್ಥರ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ. ಬೇರೊಂದು ಊರಿನ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಿಂದಾಗಿ ನೀಲಗುಂದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಚಿಂಚಲಿ ಗ್ರಾಮದ ಅಭ್ಯರ್ಥಿ ವೀರೇಂದ್ರ ಲಕ್ಷ್ಮೀಗುಡಿ ಎಂಬಾತ ನೀಲಗುಂದದ ಒಂದನೇ ವಾರ್ಡ್‌ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾನೆ.
ನಾಮಪತ್ರ ಸಲ್ಲಿಕೆಯ ಬಗ್ಗೆ ವಿಜಯಸಾಕ್ಷಿಗೆ ಪ್ರತಿಕ್ರಿಯಿಸಿರುವ ವೀರೇಂದ್ರ ಲಕ್ಷ್ಮೀಗುಡಿ, ನಾನು ನೀಲಗುಂದ ಗ್ರಾಮಸ್ಥರಿಗೆ ನಾಮಪತ್ರ ಸಲ್ಲಿಸುವ ಕುರಿತು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಬೇಡ ಎಂದಿದ್ದರು. ನಾನು ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ ಎಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಅಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನಗೆ ಯಾರ ಬೆಂಬಲವೂ ಇಲ್ಲ. ಅಭಿವೃದ್ಧಿ ಕೆಲಸವೇ ನನ್ನ ಗುರಿ. ನೀಲಗುಂದ ಗ್ರಾಮಸ್ಥರು ಅವಕಾಶ ಮಾಡಿಕೊಟ್ಟರೆ ಗ್ರಾಮದಲ್ಲಿ ಆಗದಿರುವ ಅಭಿವೃದ್ಧಿ ಕೆಲಸಗಳನ್ನು ನಾನು ಗ್ರಾಮ ಪಂಚಾಯತಿ ಸದಸ್ಯನಾಗುವ ಮೂಲಕ ಮಾಡಿ ತೋರಿಸುತ್ತೇನೆ ಎಂದರು.
ನೀಲಗುಂದ ಗ್ರಾಮದಲ್ಲಿ ಕೋಟಿಗಟ್ಟಲೇ ಅಭಿವೃದ್ಧಿ ಕೆಲಸಗಳಾಗಿವೆ. ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಟ್ಟಿದೆ. ಎಚ್.ಕೆ.ಪಾಟೀಲರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ನೀಲಗುಂದ ಗ್ರಾಮದಲ್ಲಿ ನಾಮಪತ್ರ ಸಲ್ಲಿಸೋಕೆ ಮೂವತ್ತು ಜನ ಸಿದ್ದರಾಗಿದ್ದರು. ಯಾರನ್ನ ಆಯ್ಕೆ ಮಾಡಬೇಕು ಎಂಬ ಗೊಂದಲದಿಂದಾಗಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇದರಲ್ಲಿ ಅಭಿವೃದ್ಧಿಯ ಕಾರಣವಿಲ್ಲ ಎಂದು ವೀರೇಂದ್ರ ಲಕ್ಷ್ಮೀಗುಡಿ ವಿಜಯಸಾಕ್ಷಿಗೆ ಸ್ಪಷ್ಟಪಡಿಸಿದರು.
ಇದರಿಂದ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶುಕ್ರವಾರ ಚಿಂಚಲಿ ಗ್ರಾ.ಪಂ.ನ 22 ಸ್ಥಾನಗಳಿಗೆ ಒಟ್ಟು 48 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಚಿಂಚಲಿ- 37, ಕಲ್ಲೂರ – 10 ಹಾಗೂ ನೀಲಗುಂದದಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದಂತಾಗಿದೆ.
ನೀಲಗುಂದ ಮತ್ತು ಕಲ್ಲೂರ ಗ್ರಾಮಸ್ಥರು ಗ್ರಾ.ಪಂ.ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದರು. ಇದಕ್ಕಾಗಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನವೂ ನಡೆದಿತ್ತು. ಕಡೆಗೆ ಕಲ್ಲೂರ ಗ್ರಾಮದವರು ಒಪ್ಪಿಗೆ ನೀಡಿ ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ ನೀಲಗುಂದ ಗ್ರಾಮದಲ್ಲೂ ಯಾರೋ ಒಬ್ಬರು ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ, ಯಾರೆಂಬುದು ನನಗೆ ಗೊತ್ತಿಲ್ಲ.
-ಹನಮಂತಪ್ಪ ಪೂಜಾರ, ಜಿ.ಪಂ.ಸದಸ್ಯ
ನಮ್ಮೂರಾಗ ಗೆಲ್ಲಾಕ ಆಗಂಗಿಲ್ರಿ. ಇಲ್ಲಿ ಎಲ್ಲಾರೂ ದೊಡ್ಡಾವ್ರು, ದುಡ್ಡಿದ್ದಾವ್ರ ಅದಾರ್ರೀ. ನಾವು ಬಡವರು. ಇಲ್ಲೇ ಎಲೆಕ್ಷನ್‌ಗೆ ನಿಂತ್ರ ದುಡ್ಡಿಲ್ದ ಗೆಲ್ಲಬೋದು. ಅಭಿವೃದ್ಧಿ ಕೆಲಸ ಮಾಡಬೋದು ಅಂತಾ ನಾಮಪತ್ರ ಸಲ್ಲಿಸಿನ್ರಿ… ನನಗೆ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಕರೆಗಳು ಬರುತ್ತಿವೆ. ಎಷ್ಟೇ ಒತ್ತಡ ತಂದರೂ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ.
ವೀರೇಂದ್ರ ಲಕ್ಷ್ಮೀಗುಡಿ, ಅಭ್ಯರ್ಥಿ