ವಿಜಯಸಾಕ್ಷಿ ಸುದ್ದಿ, ಗದಗ
ಗ್ರಾಮ ಪಂಚಾಯತಿ ಕಾರ್ಯಾಲಯದ ಪಕ್ಕದಲ್ಲೇ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದ ಅಂಗಡಿಯೊಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಅಕ್ಕಿ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಹೊಳೆಆಲೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ, ಕಾಳು ಕಡಿ ವ್ಯಾಪಾರಿ ಕುಮಾರಸ್ವಾಮಿ ಶಿವಯ್ಯ ವಸ್ತ್ರದ ಎಂಬಾತನೇ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ.
ಖಚಿತ ಮಾಹಿತಿ ಆಧಾರದ ಮೇಲೆ ಪುಡ್ ಇನ್ಸ್‌ಪೆಕ್ಟರ್ ಮಂಜುನಾಥ್ ತಳ್ಳಿಹಾಳ ಹಾಗೂ ಸಿಬ್ಬಂದಿ ಕುಮಾರಸ್ವಾಮಿ ವಸ್ತ್ರದನ ಅಂಗಡಿಯ ಮೇಲೆ ದಾಳಿ ಮಾಡಿದಾಗ 1ಲಕ್ಷ 30 ಸಾವಿರ ಬೆಲೆ ಬಾಳುವ 45 ಕ್ವಿಂಟಾಲ್ ಅಕ್ಕಿ ಸಿಕ್ಕಿ ಬಿದ್ದಿದೆ. ಆರೋಪಿ ಕುಮಾರಸ್ವಾಮಿ ವಸ್ತ್ರದ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳು ಕಡಿ ವ್ಯಾಪಾರದ ನೆಪದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಸರಕಾರ ಹಂಚಿಕೆ ಮಾಡುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ದೊಡ್ಡ ಬೆಲೆಗೆ ಬೇರೆ ಕಡೆ ಸಾಗಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.