ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರ ದುರ್ಮರಣ

0
Spread the love

ವಿಜಯಸಾಕ್ಷಿ ಸುದ್ದಿ, ಲೋಕಾಪುರ;

Advertisement

ಕಲ್ಲಿಗೆ ಡಿಕ್ಕಿಯಾಗಿ ಕಾರು ಪಲ್ಟಿ ಹೊಡೆದು ಘಟಪ್ರಭಾ ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಮೃತರು ರಾಮದುರ್ಗ ತಾಲೂಕಿನ ಗುಡಮ್ಮನಾಳ, ಮುದೇನಕೊಪ್ಪ, ಬಿಡಕಿ ಹಾಗೂ ಸುನ್ನಾಳ ಗ್ರಾಮದವರು. ಕಾರು ಚಾಲಕ ಸುನೀಲ ಸದಪ್ಪ ಅರಬೆಂಚಿ (24), ಮಹಾದೇವಗೌಡ ಶಂಕರ್ ಗೌಡ ಪಾಟೀಲ (27), ವಿಜಯ ಶಿವಾನಂದ ಲಟ್ಟಿ (26), ಎರಿತಾತಾ ಮೌನೇಶ್ವರ ಕಂಬಾರ (26) ಮೃತರು. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆರು ಜನರು ಮುಧೋಳದಿಂದ ಸಾಲಹಳ್ಳಿ ಕಡೆಗೆ ಹೊರಟಿದ್ದಾಗ ಹಲಕಿ ಗ್ರಾಮದ ಬಳಿ‌ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ರಸ್ತೆ ಬದಿಯ ಘಟಪ್ರಭಾ ಕಾಲುವೆಗೆ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ.

ಮೃತದೇಹ ಹಾಗೂ ಕಾರನ್ನು ಕ್ರೇನ್ ಮೂಲಕ‌ ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಲೋಕಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here