ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ಬರೋಬ್ಬರಿ 250 ಲೀಟರ್ ಹಾಲನ್ನು ಚರಂಡಿಗೆ ಸುರಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಲಕ್ಕವ್ವನಹಳ್ಳಿ ಬಿಎಂಸಿ ಕೇಂದ್ರದ ಹತ್ತಿರ ಈ ಘಟನೆ ನಡೆದಿದೆ. ಹಾಲಿನಲ್ಲಿ ಶೇ. 3.5ರಷ್ಟು ಕೊಬ್ಬಿನಾಂಶ ಕಡಿಮೆ ಇದೆ ಎಂದು ಹೇಳಿದ ಅಧಿಕಾರಿಗಳು. ಅಲ್ಲದೇ, ಹಲವು ರೈತರನ್ನು ಕೊಬ್ಬಿನಾಂಶ ಕಡಿಮೆ ಇದೆ ಎಂದು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷ ಪೂರ್ತಿ ಲಾಭಗಳಿಸಿ ಈಗ ನಮ್ಮ ಹಾಲನ್ನು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ನೈಸರ್ಗಿಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೊಬ್ಬಿನಾಂಶ ಕಡಿಮೆ ಆಗುತ್ತಿದೆ. ಇದಕ್ಕೆ ರೈತರನ್ನು ಹೊಣೆ ಮಾಡಿ, ಹಾಲು ಖರೀದಿಸದೆ ಅಧಿಕಾರಿಗಳು ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ರೈತರು ಬದುಕುವುದೇ ದುಸ್ತರ ಎನ್ನುವಂತಾಗಿದೆ. ಈ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಈ ರೀತಿ ವರ್ತಿಸಿದರೆ, ರೈತರು ಹಾಗೂ ಬಡವರ ಪರಿಸ್ಥಿತಿ ಏನಾಗಬೇಕು? ಅಧಿಕಾರಿಗಳು ಇದೇ ರೀತಿ ತಮ್ಮ ವರ್ತನೆ ಮುಂದುವರೆಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
ಈ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಹಾಲು ಖರೀದಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರಾಗಿರುವ ಸುಂದರ್ ಹಾಗೂ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.