ವಿಜಯಸಾಕ್ಷಿ ಕನ್ನಡದಿನಪತ್ರಿಕೆ, ಗದಗ: ಮೊನ್ನೆ ಮೊನ್ನೆ ತಾನೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ೩ ಕೋಟಿ ರೂ. ಬಿಡುಗಡೆ ಮಾಡಿದೆ. ಆಗಿಂದ ಮತ್ತೆ ಸುದ್ದಿಯಲ್ಲಿದೆ ಲಕ್ಕುಂಡಿ. ಆದರೆ ಹತ್ತಿರದಿಂದ ನೋಡಿದವರಿಗೆ ಲಕ್ಕುಂಡಿ ಕಸದ ಗುಂಡಿಯೇ ಆಗಿದೆ.
101 ದೇವಾಲಯಗಳು, 101 ಬಾವಿಗಳು ಎಂಬ ಕೀರ್ತಿಯ ಜೊತೆಗೆ ಉತ್ತರ ಕರ್ನಾಟಕದ ದೇವಾಲಯಗಳ ತೊಟ್ಟಿಲು ಎನಿಸಿರುವ ಲಕ್ಕುಂಡಿಯಲ್ಲಿ ಇಲ್ಲಿವರೆಗೆ ಪ್ರವಾಸಿಗರ ಕಣ್ಣಿಗೆ ಕಾಣ ಸಿಗುವುದು ಹತ್ತೋ, ಹನ್ನೆರಡೋ ದೇವಾಲಯಗಳು ಮಾತ್ರ. ಉಳಿದವು ಮಾಯವಾದವೇ ಅನ್ನಬೇಡಿ. ಇವೆ, ಆದರೆ ಅವು ಸ್ಥಳೀಯ ಕುಟುಂಬಗಳ ಸ್ಟೋರ್ ರೂಂ ಆಗಿ ಪರಿವರ್ತನೆಯಾಗಿವೆ ಅಷ್ಟೇ.
ಹಾಗಂತ ‘ಚರಿತ್ರೆಯ ಅರಿವಿಲ್ಲದವರು’ ಅಂತಾ ಅವರನ್ನು ತೆಗಳುತ್ತ ಕೂಡಬೇಡಿ. ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ದೇವಾಲಯಗಳು ಅವಕೃಪೆಗೆ ಒಳಗಾಗಿವೆ. ರಣ ರಣ ಹೊಡೆಯುವ ದೇವಾಲಯಗಳನ್ನು ಸ್ಥಳೀಯ ಕುಟುಂಬಗಳು ತಮ್ಮ ನಿತ್ಯದ ಬದುಕಿಗೆ ಹೊಂದುವಂತೆ ಮಾರ್ಪಡಿಸಿಕೊಂಡಿವೆ.
ಕೆಲವರಿಗೆ ದೇವಾಲಯದ ಗೋಡೆಗಳು ಕುಳ್ಳು ಉತ್ಪಾದನೆಯ ಕೇಂದ್ರಗಳು. ಗುಡಿಯ ಗೋಡೆಗೆ ರಪ್ಪಂತ ಪೆಂಡಿ ಸೆಗಣಿ ಒಗೆದರೆ ಫಟ್ಟಂತ ಗೋಡೆಯನ್ನು ಅಪ್ಪಿಕೊಳ್ಳುತ್ತದೆ. ಎರಡು ದಿನ ಬಿಸಲಿಗೆ ಬಿದ್ದರೆ ಕುಳ್ಳು ರೆಡಿ. ಆ ಮೂಲಕ ಅವರ ಒಲೆಯಲ್ಲಿ ಬೆಂಕಿ ಬಿದ್ದು ಪಟ್‌ಪಟ್ ಸಪ್ಪಳದೊಂದಿಗೆ ರೊಟ್ಟಿಯೂ ಸಿದ್ಧ.
ಇನ್ನು ಕೆಲವರು, ಮಳೆ-ಗಾಳಿಯಿಂದ ರಕ್ಷಿಸಲು ಕಟ್ಟಿಗೆ ತುಂಡುಗಳು, ಕಬ್ಬಿಣದ ಸಾಮಾನು ಇತ್ಯಾದಿ ವಸ್ತುಗಳನ್ನು ದೇವಾಲಯದ ಮಂಟಪದಲ್ಲಿ ಸಂಗ್ರಹಿಸುವ ‘ಹಾಬಿ’ ಹೊಂದಿದ್ದಾರೆ. ಇವೆಲ್ಲವನ್ನೂ ಟೀಕಿಸುವ ಅಥವಾ ಹೀಗಳೆಯುವ ಉದ್ದೇಶಕ್ಕೆ ಇದನ್ನು ಬರೆಯುತ್ತಿಲ್ಲ. ‘ಉಜ್ವಲ’ದಂತಹ ಸಾವಿರಾರು ಕೋಟಿ ರೂ. ಗಳ ಯೋಜನೆ ಬಂದರೂ ಒಲೆಗೆ ಕುಳ್ಳು ಹಾಕಿದರಷ್ಟೇ ಇವರ ರೊಟ್ಟಿ ಬೇಯುತ್ತಿದೆ ಎಂದರೆ, ‘ಉಜ್ವಲ’ಗಳ ಯಶಸ್ಸು ಅರ್ಥವಾಗುತ್ತದೆ. ಜನ ಅನಿವಾರ್ಯಕ್ಕೆ ಈ ದೇವಾಲಯ ಬಳಸುತ್ತಿದ್ದಾರೆಯೇ ಹೊರತು, ಅವರಿಗೇನೂ ಗುಡಿ ಒಳಗಿನ ದೇವರ ಭಕುತಿ ಕಡಿಮೆಯೇನಾಗಿಲ್ಲ.
ಆದರೆ, ಈ ದೇವಾಲಯಗಳನ್ನು ಸಂರಕ್ಷಿಸಬೇಕಾದ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಒಟ್ಟಾರೆ ಜಿಲ್ಲಾಡಳಿತ ಏನು ಮಾಡುತ್ತಿವೆ ಎಂಬ ಪ್ರಶ್ನೆ ಕಾಡುತ್ತದೆ. ಲಕ್ಕುಂಡಿಯನ್ನು ಮಾದರಿ ಪ್ರವಾಸಿ ತಾಣ ಮಾಡಲೆಂದೇ 2017 ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿತ್ತು. ವಾರ್ಷಿಕ 3 ಕೋಟಿ ರೂ. ಬಜೆಟ್ ನೀಡುವ ಭರವಸೆ ನೀಡಲಾಗಿತ್ತು. ಆರಂಭದಲ್ಲಿ ೫೦ ಲಕ್ಷ ರೂ. ಬಿಡುಗಡೆಯೂ ಆಗಿತ್ತು. ಆದರೆ ಕಚೇರಿ, ಸಿಬ್ಬಂದಿ ನೇಮಕದ ಕೊರತೆಯಿಂದ ಆ ರೊಕ್ಕ ವಾಪಾಸ್ ಸರ್ಕಾರಕ್ಕೆ ಹೋಗಿತ್ತು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಲಾದರೂ ಲಕ್ಕುಂಡಿ ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿ, ಐತಿಹಾಸಿಕ ವಾಸ್ತುಶಿಲ್ಪದ ಭವ್ಯ ಇತಿಹಾಸವನ್ನು ತೋರಿಸುವ ಜೀವಂತ ಮ್ಯೂಸಿಯಂ ಆಗಿ ಬದಲಾಗುವುದೇ?
ಚಾಲುಕ್ಯ ವಾಸ್ತುಶಿಲ್ಪದ ತಾಣ
ಲಕ್ಕುಂಡಿಯನ್ನು ಜೈನ ದೇವಾಲಯಗಳ ತವರೆಂದೇ ಗುರುತಿಸಲಾಗುತ್ತದೆ. ಇಲ್ಲಿ 11 ನೇ ಶತಮಾನದ ಶೈವ ಪರಂಪರೆ ಸಾರುವ ದೇವಾಲಯಗಳು ಸಾಕಷ್ಟಿವೆ. ಚಾಲುಕ್ಯ ಶೈಲಿಯೆಂದೇ ಹೆಸರಾದ ಚಾಲುಕ್ಯ ವಾಸ್ತುಶಿಲ್ಪ ಇಲ್ಲಿ ಮೈದಾಳಿದೆ. ವಿಶಾಲ ದೇವಸ್ಥಾನ, ಮಂಟಪ, ದೇವಾಲಯದ ಎದುರು ನಂದಿ ವಿಗ್ರಹ, ಒಳಗೆ ಶಿವಲಿಂಗ- ಈ ಮಾದರಿಯ ದೇವಾಲಯಗಳೂ ಇವೆ, ಜೈನ ಪರಂಪರೆ ಸಾರುವ ದೇವಾಲಯಗಳೂ ಇವೆ. ಚಾಲುಕ್ಯರ ನಂತರ ಬಂದ ಹೊಯ್ಸಳರೂ ಈ ದೇವಾಲಯಗಳನ್ನು ಸಂರಕ್ಷಿಸಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ ಲಕ್ಕುಂಡಿಯ ಸೊಸೆ ಎನ್ನುವುದಕ್ಕಿಂತ ಮನೆ ಮಗಳು ಇದ್ದಂತೆ. ಶಿಲ್ಪಕಲೆ ಜೊತೆಗೆ ಸಾಹಿತ್ಯವನ್ನೂ ಪೋಷಿಸಿದ ಅತ್ತಿಮಬ್ಬೆ ನಾಡಿನ ಅನನ್ಯ ಮಹಿಳೆಯರಲ್ಲಿ ಒಬ್ಬರು.