ಚಿಕ್ಕೋಡಿ/ಗೋಕಾಕ ಪ್ರತ್ಯೇಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ: ಸಚಿವ ರಮೇಶ್ ಜಾರಕಿಹೊಳಿ

0
Spread the love

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

Advertisement

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಅತ್ಯಂತ ಅವಶ್ಯಕವಿದೆ. ಚಿಕ್ಕೋಡಿ ಅಥವಾ ಗೋಕಾಕ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಇವೆರಡರಲ್ಲಿ ಒಂದನ್ನು ಸಲೀಸಾಗಿ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆಗೊಳಿಸಿ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಕೈಬಿಡಲಾಯಿತು ಎಂದು ತಿಳಿಸಿದರು.

ಪ್ರತ್ಯೆಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡುವೆ ಎಂದು ಸಚಿವ ರಮೇಶ್ ಜಾರಕಿಹೋಳಿ ಭರವಸೆ ನೀಡಿದರು.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು. ಇದು ರಾಜಕೀಯ ತಿರುವು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

ಈ ಸಂದರ್ಭದಲ್ಲಿ ಬಿ.ಆರ್.ಸಂಗಪ್ಪಗೋಳ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಮುಂತಾದವರು ಇದ್ದರು.


Spread the love

LEAVE A REPLY

Please enter your comment!
Please enter your name here