ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ಹೋದ ತಪ್ಪಿಗೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯ ನೆಟ್ಟೆಗೆರೆ ಗೇಟ್ ಸಮೀಪ ಈ ಘಟನೆ ನಡೆದಿದೆ.
Advertisement
ನೆಟ್ಟೆಗೆರೆಯ ನಿವಾಸಿ ಮಾಯಣ್ಣಗೌಡ ಎಂಬುವರು ಪಂಚಾಯತಿ ಚುನಾವಣೆ ವೇಳೆ ಗಿರಿಯಮ್ಮ ಅನ್ನೋ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು, ಇದನ್ನು ಸಹಿಸದೇ ವಿರೋಧಿ ಬಣದವರು ಈ ದುಶ್ಕೃತ್ಯ ಎಸಗಿದ್ದಾರೆ ಅಂತಾ ಆರೋಪಿಸಿದ್ದಾರೆ.
ತಡರಾತ್ರಿ ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಬೆಂಕಿ ಇಟ್ಟ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಬೆಳೆಯುವ ಹಂತದಲ್ಲಿದ್ದ ಅಡಿಕೆ ಗಿಡಗಳು, ಹನಿ ನೀರಾವರಿಯ ಪೈಪ್ ಗಳು, ಪಂಪ್ ಸೆಟ್ ಮೋಟಾರ್ ಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.