ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೀಗ ವರ್ಚುವಲ್ ರ‍್ಯಾಲಿ ಬಳಕೆಯಾಗುವ ಮೂಲಕ ಡಿಜಿಟಲ್ ಟಚ್ ಬಂದಿದೆ. ಹೌದು ಶನಿವಾರ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ವರ್ಚುವಲ್ ರ‍್ಯಾಲಿ ಮೂಲಕ ಪ್ರಜ್ಞಾವಂತ ಮತದಾರರನ್ನು ಸಂಪರ್ಕಿಸಿದರು.
ವರ್ಚುವಲ್ ರ‍್ಯಾಲಿಗೆ ಮತದಾರರು ಸ್ವಯಂ ಪ್ರೇರಿತರಾಗಿ ಸಂಪರ್ಕವಾಗುವ ಮೂಲಕ ರ‍್ಯಾಲಿ ಯಶಸ್ವಿಗೊಳಿಸಿದರು. ಈ ವೇಳೆ ಮತದಾರರ ಬಳಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಕೊವಿಡ್ ಪರಿಸ್ಥಿತಿಯಿದ್ದರೂ ಸಹ ನಾವು ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಮತದಾರರನ್ನು ಸಂಪರ್ಕ ಮಾಡಿದ್ದೇವೆ. ಆದರೂ ಸಹ ವರ್ಚುವಲ್ ರ‍್ಯಾಲಿ ಮೂಲಕವೂ ಪ್ರಜ್ಞಾವಂತರ ಸಂಪರ್ಕದ ಪ್ರಯತ್ನವಾಗಿ ಇಂದು ಈ ರ‍್ಯಾಲಿ ನಡೆಯುತ್ತಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಹಾಗೂ ಮಾಡುತ್ತಿರುವ ಬದಲಾವಣೆಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ವರ್ಚುವಲ್ ರ‍್ಯಾಲಿ ಮಾಡಲಾಗುತ್ತಿದೆ.
ರಾಜ್ಯದಲ್ಲಿಯೂ ಬದಲಾವಣೆ ನಡೆಯುತ್ತಿದ್ದು, ಸಿಎಂ ಬಿಎಸ್ವೈ ಅವರೂ ಸಹ ಮೋದಿಯವರಂತೆ ಹಗಲಿರುಳು ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕೊವಿಡ್-19 ಹಾಗೂ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜನರಿಗೆ ಸಹಾಯಹಸ್ತ ಚಾಚಿದ್ದಾರೆ ಎಂದರು.
ದೇಶದಲ್ಲಿ ಜಾರಿಯಾಗಿರುವ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿ ಮಾಡುವ ಉದ್ದೇಶ ಸಿಎಂ ಬಿಎಸ್‌ವೈ ಅವರಿಗಿದೆ. ಅವರ ಕೈ ಬಲಪಡಿಸಬೇಕಿದ್ದರೆ, ವಿಧಾನಪರಿಷತ್‌ನಲ್ಲಿಯೂ ಸಹ ಬಿಜೆಪಿಗೆ ಹೆಚ್ಚಿನ ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ ಎಸ್ ವಿ ಸಂಕನೂರ ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕೆಂದು ವರ್ಚುವಲ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮತದಾರರಲ್ಲಿ ವಿನಂತಿಸಿಕೊಂಡರು.
ಇದೇ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಇದರಿಂದುಂಟಾಗುವು ಅನುಕೂಲತೆಗಳನ್ನು ತಿಳಿಸುವುದು ಬಿಟ್ಟು ಬಿಜೆಪಿ ವಿರುದ್ಧ ಕಾಂಗ್ರೆಸ್‌ನವರು ಆರೋಪ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಸಹ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕಾಗಿ ಈಗಾಗಲೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬ್ಲೂ ಪ್ರಿಂಟ್ ತಯಾರು ಮಾಡಿದ್ದಾರೆ. ಕೈಗಾರಿಕಾ ಕ್ಲಸ್ಟರ್‌ಗಳ ನಿರ್ಮಾಣದಿಂದ ಆಯಾ ಜಿಲ್ಲೆಗಳಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆಂದು ವಿವರಿಸಿದರು.
ಯಾವುದೇ ಬಗೆಯ ಕಾನೂನು ಹಾಗೂ ನೂತನ ನೀತಿಗಳಿಗೆ ವಿಧಾನ ಪರಿಷತ್‌ನಲ್ಲಿನ ಅನುಮೋದನೆಯೂ ಪ್ರಮುಖವಾಗಿದ್ದು, ನಮ್ಮ ಸಂಖ್ಯೆಯನ್ನು ಹೆಚ್ಚಿಸಲು ಪಕ್ಷದ ಅಭ್ಯರ್ಥಿ ಎಸ್ ವಿ ಸಂಕನೂರ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ವರ್ಚುವಲ್ ರ‍್ಯಾಲಿಯಲ್ಲಿ ಹಲವು ಯುವ ಪದವೀಧರರು ಭಾಗವಹಿಸಿದ್ದರು.
ಚುನಾವಣಾ ಪ್ರಚಾರಕ್ಕೆ ವರ್ಚುವಲ್ ರ‍್ಯಾಲಿ
Advertisement