ವಿಜಯಸಾಕ್ಷಿ ಸುದ್ದಿ, ಬಳ್ಳಾರಿ
ಜಾಮೀನು ದೊರೆತು ಹೊರಬಂದಿದ್ದರೂ ಬಳ್ಳಾರಿ ಪ್ರವೇಶದಿಂದ ವಂಚಿತವಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎಂಟು ವಾರಗಳ ಕಾಲ ಬಳ್ಳಾರಿ ಮತ್ತು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ನ್ಯಾಯಾಲಯ ಬಳ್ಳಾರಿ ಪ್ರವೇಶಿಸದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಸಾರನ್ ನೇತೃತ್ವದ ಪೀಠ ಬಳ್ಳಾರಿಗೆ 8 ವಾರಗಳ ಕಾಲ ತೆರಳಲು ಅನುಮತಿ ನೀಡಿದೆ.
ಬಳ್ಳಾರಿಗೆ ಭೇಟಿ ನೀಡಿದ ಪ್ರತಿ ಸಲವೂ ಬಳ್ಳಾರಿ, ಕಡಪ, ಅನಂತಪುರ ಜಿಲ್ಲೆಗಳ ಎಸ್‌ಪಿಗೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.
ಬಳ್ಳಾರಿಗೆ ಹೋಗಲು ಜನಾರ್ದನ ರೆಡ್ಡಿಗೆ ಅನುಮತಿ ನೀಡುವುದಕ್ಕೆ ವಿರೋಧಿಸಿದ್ದ
ಸಿಬಿಐ, ಈ ಹಿಂದೆ ಪ್ರಕರಣದ ವಿಚಾರಣೆ ಅಧಿಕಾರಿಯ ವಾಹನ ಸುಡಲಾಗಿತ್ತು.
ಬಳ್ಳಾರಿಯಲ್ಲಿ ಅಕ್ರಮ ಗಣಿ ಪ್ರಕರಣದ 47 ಸಾಕ್ಷಿಗಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ. ಈ ಕುರಿತು ಸಾಕ್ಷಿಧಾರರೊಬ್ಬರು ಪತ್ರವನ್ನೂ ಬರೆದಿದ್ದಾರೆ. ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರೆ ಪ್ರಕರಣ ಬಿದ್ದುಹೋಗುವ ಸಾಧ್ಯತೆಯಿದೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.
ಪ್ರತಿವಾದ ಮಂಡಿಸಿದ ಆರೋಪಿ ಪರ ನ್ಯಾಯವಾದಿ ಮುಕುಲ್ ರೋಹ್ಟಗಿ, ಸಿಬಿಐ ಆರೋಪದಲ್ಲಿ ಸತ್ಯಾಂಶವಿಲ್ಲ. ನನ್ನ ಕಕ್ಷಿಧಾರರು ಈ ಹಿಂದಿನ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಸಿಬಿಐ ಹೇಳುವ ಪ್ರಕಾರ ಷರತ್ತು ಉಲ್ಲಂಘಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ವಾದಿಸಿದ್ದರು.
ಈ ಹಿಂದೆ 2020ರಲ್ಲಿ ಶ್ರೀರಾಮುಲು ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡ್ಡಿಗೆ ಎರಡು ದಿನ ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು.
ಸಹೋದರ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರಲು ಅನುಮತಿ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಾಸಕ ಸೋಮಶೇಖರ ರೆಡ್ಡಿ, ಕೊನೆಗೂ ನ್ಯಾಯ ದೇವತೆ ಕಣ್ಣು ತೆರೆದಿದ್ದಾಳೆ.
ಜನಾರ್ದನರೆಡ್ಡಿ ಅವರು ಬಳ್ಳಾರಿಗೆ ಬಂದು ಶ್ರಾವಣ ಮಾಸದ ವಿಶೇಷ ಪೂಜೆಗಳಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಹೇಳಿದರು.