ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಇಂದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹುಟ್ಟುಹಬ್ಬ. ಆದರೆ, ಉಮಾಶ್ರೀ ಅವರು ಮಾತ್ರ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ತೀವ್ರವಾಗಿ ಉಲ್ಭಣವಾಗಿದ್ದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಜನ ನೋವಿನಿಂದ ನರಳುತ್ತಿರುವ ಇಂತಹ ಸಂದರ್ಭದಲ್ಲಿ ಹುಟ್ಟು ಹಬ್ಬದಂತಹ ಸಂಭ್ರಮದ ಕ್ಷಣವನ್ನು ನಾನು ಅನುಭವಿಸುವುದಿಲ್ಲ.
ನನ್ನ ನಾಡಿನ ಜನತೆ ಇಂತಹ ಮಹಾರೋಗದಿಂದ ಮುಕ್ತರಾಗಿ, ಭವ್ಯ ಭಾರತ ನಗುಮುಖದಿಂದ ಇರಬೇಕೆನ್ನುವುದೇ ನನ್ನ ಸಂತಸ. ಇಂತಹ ಸಂದರ್ಭದಲ್ಲಿ ನನಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರಿಂದ ಖುಷಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜನ ನರಳಾಡುತ್ತಿದ್ದಾರೆ.
ಬಡವರು ಬೀದಿಗೆ ಬಂದಿದ್ದಾರೆ. ಸರ್ಕಾರ, ಬಡವರ ನೋವು ಆಲಿಸುವ ಕೆಲಸ ಮಾಡುತ್ತಿಲ್ಲ. ಕೊರೊನಾದಿಂದ ಜನರ ಬದುಕು ಎಲ್ಲ ರೀತಿಯಿಂದಲೂ ಅಕ್ಷರಶಃ ಬೀದಿಗೆ ಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಇನ್ನೊಂದೆಡೆ ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ಇದರಿಂದ ರೋಗಿಗಳು ಸಾಯುತ್ತಿದ್ದಾರೆ. ಆದರೂ ಸರ್ಕಾರದ ಮನ ಮಿಡುಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಲಾಕ್ ಡೌನ್ ಘೋಷಣೆ ಮಾತ್ರ ಮಾಡಿದೆ. ಆದರೆ, ದುಡಿಯುವ ವರ್ಗಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಸರ್ಕಾರ ಕೂಡಲೇ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ದುಡಿಯುವ ವರ್ಗ, ಕೂಲಿ ಕಾರ್ಮಿಕರು, ಟ್ಯಾಕ್ಸಿ, ಆಟೋ ಡ್ರೈವರ್ ಸೇರಿದಂತೆ ಅಂದೆ ದುಡಿದು ಊಟ ಮಾಡುವ ವರ್ಗದ ಹಿಂದೆ ಸರ್ಕಾರ ನಿಲ್ಲಬೇಕು. ಕೂಡಲೇ ಇಂತಹ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.