ವಿಜಯಸಾಕ್ಷಿ ಸುದ್ದಿ, ಡಂಬಳ (ಧರ್ಮಪುರ)
ಡಂಬಳ ಗ್ರಾಮದ ಜಮೀನಿನೊಳಗೆ ಚಾಲುಕ್ಯ ಕಾಲದ ಶಿಲ್ಪಗಳು ಪತ್ತೆಯಾಗಿವೆ. ಹೊಲದಲ್ಲಿರುವ ಮರವೊಂದರಲ್ಲಿ ಜೇನು ಕಟ್ಟಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸ್ಥಳೀಯರು ತೆರಳಿದಾಗ ಇಲ್ಲಿ ದೇಗುಲದ ಅವಶೇಷಗಳು ಲಭಿಸಿವೆ.
ತಳವಿನ್ಯಾಸ ನಕ್ಷತ್ರದಾಕಾರದ ದೇವಾಲಯದ ಪಾಣಿಪೀಠ ಸ್ವಲ್ಪ ಮಟ್ಟಿಗೆ ನಕ್ಷತ್ರದಾಕಾರದ ತಳಹದಿ, ನವರಂಗ, ಮಧ್ಯದಲ್ಲಿರುವ ವೃತ್ತಾಕಾರದ ನಾಟ್ಯಪೀಠವು ಸುಂದರವಾದ ಅಷ್ಟದಳ ಕಮಲದ ಹೂವಿನ ಸುಂದರ ಕೆತ್ತನೆಯಿದ್ದು ಚಾಲುಕ್ಯ ಶೈಲಿಯ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದಿದ್ದು ಕಾಣುತ್ತಿವೆ.
ರತಿ ಕ್ರಿಡೆಯ ಆಕಾರದ ಸುಂದರ ಕೆತ್ತನೆಯ ವಿಗ್ರಹಗಳು ಪತ್ತೆಯಾಗಿದ್ದು, ಶಿಥಿಲಾವಸ್ಥೆಯಲ್ಲಿ ಇರುವುದು ಕಾಣುತ್ತಿವೆ. ಆನೆ, ಸಿಂಹ ಯಾಳಿಗಳ ಸಾಲುಗಳನ್ನು ಉಬ್ಬುಶಿಲ್ಪಗಳಲ್ಲಿ ಬಿಡಿಸಲಾಗಿವೆ. ವಿವಿಧ ನರ್ತನೆಯ ಶಿಲ್ಪಗಳು ಕೆತ್ತಲಾಗಿರುವ ಶಿಲೆಗಳು, ಬಿದ್ದಿರುವ ಕಂಬಗಳು, ದೇವಾಲಯ ಗರ್ಭಗೃಹ ಮೆಲ್ಭಾಗ ಬಿದ್ದು ಮಣ್ಣಿನೊಳಗೆ ದೇವಾಲಯ ಹುದುಗಿದೆ ಎಂದು ಊಹಿಸಲಾಗಿದೆ.
ಶಿಲ್ಪಗಳು ಚಾಲುಕ್ಯಶೈಲಿಯಲ್ಲಿ ಇರುವುದರಿಂದ ಈ ದೇವಾಲಯ ಕ್ರಿ.ಶ. 12ನೇ ಶತಮಾನದ್ದೆಂದು ಊಹಿಸಲಾಗಿದೆ. ಈ ದೇವಾಲಯದ ಕಂಬಗಳ ಹಾಗೂ ಪೀಠದ ಸುತ್ತಮುತ್ತಲೂ ಸುಂದರ ಕೆತ್ತನೆಯ ಮುಖ ಮಂಟಪ ಲಲಾಟದ ಲಕ್ಷ್ಮಿ ವಿಗ್ರಹ ಕಿರುಶಿಲ್ಪವಿರುವುದು ಕಾಣುತ್ತದೆ. ಇಲ್ಲಿ ಪತ್ತೆಯಾಗಿರುವ ಶಾಸನದ ಹಾಗೂ ಈ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಇತಿಹಾಸ ತಜ್ಞರಿಂದ ಕೂಡಲೇ ಸಂಶೋಧನೆ ಮಾಡಿಸಿ, ಈ ದೇವಾಲಯ ಪುನರ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಶೋಧನೆ ಮಾಡಿಸಿ ವರದಿ
ಐತಿಹಾಸಿಕ ಹಿನ್ನೆಲೆಯುಳ್ಳ ಡಂಬಳ ಗ್ರಾಮದೊಳಗೆ ಇಂದು ಸಿಕ್ಕಿರುವ ಕ್ರಿ.ಶ. 12 ಶತಮಾನದ ಶಾಸನದ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತಂದು, ಅದರ ಬಗ್ಗೆ ಸಂಶೋಧನೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಡಾ| ಆಶಪ್ಪ ಪೂಜಾರ
ತಹಸೀಲ್ದಾರ್, ಮುಂಡರಗಿ
ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ
ಮುರ್ತುಜಸಾಬ ತಾಂಬೋಟಿ ಅವರ ಜಮೀನಿನೊಂದರಲ್ಲಿ ಪುರಾತನ ಕಾಲದ ಶಾಸನ ಹಾಗೂ ದೇವಾಲಯದ ಅವಶೇಷಗಳು ದೊರೆತಿರುವ ಮಾಹಿತಿ ಲಭ್ಯವಾಗಿದೆ. ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಇಂತಹ ಇತಿಹಾಸ ಹಿನ್ನೆಲೆಯುಳ್ಳ ದೇವಾಲಯಗಳನ್ನು ಸಂರಕ್ಷಣೆ ಮಾಡತ್ತೇವೆ.
- ರವೀಂದ್ರ ಹತ್ತಿಕಾಳ
ಸಂರಕ್ಷಣಾ ಸಹಾಯಕ ಅಧಿಕಾರಿಗಳು
ಪುರಾತತ್ವ ಇಲಾಖೆ ಗದಗ