- ಸತತ 24 ಗಂಟೆ ಪರಿಶೀಲಿಸಿದ ಅಧಿಕಾರಿಗಳ ತಂಡ
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಶಾಸಕ ಜಮೀರ್ ಅಹ್ಮದ್ ಮನೆ ದಾಳಿ ನಡೆಸಿದ್ದ ಇಡಿ ತಂಡ ಸತತ 24 ಗಂಟೆಗಳ ಕಾಲ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳಿಗೆ ತಡಕಾಡಿ ಇಂದು ಪರಿಶೀಲನೆ ಅಂತ್ಯಗೊಳಿಸಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯ ಜಮೀರ್ ಅಹ್ಮದ್ ಮನೆಯೊಳಗಿನ ಇಂಟಿರಿಯರ್ ಡಿಸೈನ್, ವೈಭವೋಪೇತವಾದ ಅರೆಬಿಕ್ ಶೈಲಿಯ ಪೀಠೋಪಕರಣ ಕಂಡು ಇಡಿ ದಂಗಾಗಿದ್ದಾರೆ.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನ್ನ ಮನೆ ನಿರ್ಮಾಣದ ಬಗ್ಗೆ ಯಾರೋ ದೂರು ನೀಡಿದ್ದರು. ಈ ಕಾರಣಕ್ಕೆ ದಾಳಿ ನಡೆದಿದೆ. ಮನೆ ನಿರ್ಮಿಸಲು 7 ವರ್ಷ ಬೇಕಾಗಿದೆ. ಎಲ್ಲವೂ ವೈಟ್ ಮನಿಯಿಂದ, ಸ್ವಂತ ಸಂಪಾದನೆಯಿಂದಲೇ ನಿರ್ಮಿಸಿದ್ದೇನೆ. ಆದಾಯ ತೆರಿಗೆ ಎಲ್ಲವನ್ನೂ ಸರಿಯಾಗಿಯೇ ಪಾವತಿ ಮಾಡಿದ್ದೇನೆ. ಮನೆಯ ಮೇಲೆ ಹಲವರಿಗೆ ಕಣ್ಣಿತ್ತು. ಹಾಗಾಗಿ ಯಾರೋ ಇಡಿಗೆ ದೂರು ನೀಡಿದ್ದರು. ದಾಳಿ ನಡೆಸಿದ್ದಾರೆ ಎಂದರು.
ನಿನ್ನೆ ನಡೆದಿದ್ದ ದಾಳಿ ಇಂದು ಅಂತ್ಯವಾಗಿದೆ. ಅಧಿಕಾರಿಗಳಿಗೆ ಎಲ್ಲಾ ದಾಖಲೆ, ಮಾಹಿತಿ ನೀಡಿದ್ದೇನೆ. ಎಲ್ಲವನ್ನು ಪರಿಶೀಲನೆ ನಡೆಸಿ, ಸರಿಯಾಗಿ ಇರುವುದರಿಂದಲೆ ವಾಪಸ್ ಹೋಗಿದ್ದಾರೆ. ಅಗತ್ಯಬಿದ್ದರೆ ವಿಚಾರಣೆಗೆ ಕರೆಯುತ್ತೇವೆ ಎಂದಿದ್ದಾರೆ. ರಾಜಕೀಯದಲ್ಲಿ ವಿರೋಧಿಗಳು ಸಹಜ. ನನಗೆ ಆಗದವರು ದೂರು ನೀಡಿದ್ದಾರೆ. ಇಂದಲ್ಲ ನಾಳೆ ಇಡಿ ಅಧಿಕಾರಿಗಳಿಂದ ಮನೆ ಪರಿಶೀಲನೆ ನಡೆಯಲೇ ಬೇಕಿತ್ತು. ಈಗಲೇ ಅಧಿಕಾರಿಗಳು ಬಂದು ಪರಿಶೀಲಿಸಿದ್ದು ಒಳ್ಳೆಯದಾಯಿತು. ಇದರಿಂದ ನನಗೂ ನೆಮ್ಮದಿ. ಅಧಿಕಾರಿಗಳ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಹೇಳಿದರು.