ವಿಜಯಸಾಕ್ಷಿ ಸುದ್ದಿ, ಗದಗ
ನಗರದ ಹೊರವಲಯದಲ್ಲಿರುವ ಜಿಮ್ಸ್ ನಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮವಾಗಿ ಮೂವರು ಪರೀಕ್ಷಾ ಸ್ಕ್ವಾಡ್ ಗಳು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಜಿಮ್ಸ್‌ನ ‘ಬಿ’ ಬ್ಲಾಕ್ ನ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯರಾದ ದೆಹಲಿಯ ಡಾ.ಸೌಮಿಲ್ ಪಿ.ಮರ್ಜಂಟ್ ಹಾಗೂ ವಿ.ಕೆ ರಂಗಾ ಅವರು ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡಿದ್ದಾರೆ. ಅದರಂತೆ ಬೆಂಗಳೂರಿನ ಡಾ.ರವಿರಾಜ್ ಕೆ.ಜಿ. ತೀವ್ರ ಅಸ್ವಸ್ಥಗೊಂಡಿದ್ದಾರೆ.
ಸದ್ಯ ಮೂವರಲ್ಲಿ ಇಬ್ಬರು ವೈದ್ಯರು ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಅಸ್ವಸ್ಥಗೊಂಡ ಓರ್ವ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಜಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ
ಪ್ರಯೋಗಾಲಯದ ಅಂತಿಮ
ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸ್ಕ್ವಾಡ್ ಗಳಾಗಿ ಹೆಜ್ಜೇನು ದಾಳಿಯಿಂದ ಗಾಯಗೊಂಡಿರುವ ಈ ಮೂವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ.
ಇವುಗಳಿಂದ ತಪ್ಪಿಸಿಕೊಳ್ಳಲು ಓಡಿ ರಸ್ತೆಗೆ ಬಂದರೂ ಬಿಡದ ಜೇನು ಹುಳುಗಳು ಕಚ್ಚಿ ಗಾಯಗೊಳಿಸಿವೆ.
ಇನ್ನು ಹೆಜ್ಜೇನು ದಾಳಿಯಿಂದ ಜಿಮ್ಸ್ ಆವರಣದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.