ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿಯರಿಂದ ಗೌರವ ಅರ್ಪಣೆ

0
Shifting of teaching classes of Women's College to a secure building
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಕಳೆದ ಮೂರನಾಲ್ಕು ವರ್ಷದಿಂದ ವರ್ಗ ಕೋಣೆಗಳ ಸೋರಿಕೆಯಿಂದ ಸಮಸ್ಯೆ ಆಗಿದ್ದ ನಗರದ ಸರಕಾರಿ ಮಹಿಳಾ ಕಾಲೇಜಿಗೆ ಪರ್ಯಾಯ ವ್ಯವಸ್ಥೆ ಮಾಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರವಿರುವ ಸರಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ಶತಮಾನದಷ್ಟು ಹಳೆಯದಾಗಿರುವದರಿಂದ ಬೋಧನಾ ಕೊಠಡಿಗಳು ಸೋರುತ್ತಿತ್ತು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಜುಲೈ 19ರಂದು ಭೇಟಿ ನೀಡಿ, ಎಲ್ಲ ಕ್ಲಾಸ್ ರೂಮ್‌ಗಳನ್ನು ಸ್ವತಃ ಪರಿಶೀಲಿಸಿದ್ದರು.

ಕಟ್ಟಡದಲ್ಲಿನ ವರ್ಗಕೋಣೆಗಳು ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಮನಗಂಡು, ಜಿಲ್ಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ನಂತರ ಜಿಲ್ಲಾಧಿಕಾರಿಗಳು, ಅಂದೇ ಡೈಯಟ್ ಕಟ್ಟಡ, ಟಿಸಿಡಬ್ಲ್ಯೂ ಕಾಲೇಜ ಕಟ್ಟಡ ಮತ್ತು ಕವಿವಿ ಯುಪಿಎಸ್ ಶಾಲಾ ಕಟ್ಟಡಗಳನ್ನು ಪರಿಶೀಲಿಸಿದರು. ನಂತರ ಕವಿವಿ ಯುಪಿ ಶಾಲಾ ಕಟ್ಟಡಕ್ಕೆ, ಡೈಯಟ್ ಆವರಣದ ಕಟ್ಟಡಗಳಿಗೆ ಹಾಗೂ ಆಲೂರು ಸರ್ಕಲ್‌ನಲ್ಲಿರುವ ಟಿಸಿಡಬ್ಲ್ಯೂ ಕಟ್ಟಡಗಳಿಗೆ ಭೇಟಿ ನೀಡಿ, ಅಲ್ಲಿನ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕೊಠಡಿ ಲಭ್ಯತೆ ಬಗ್ಗೆ ಮಾಹಿತಿ ಪಡೆದರು.

Shifting of teaching classes of Women's College to a secure building

ನಂತರ ಕವಿವಿ ಕುಲಪತಿ, ಕುಲಸಚಿವರೊಂದಿಗೆ ಚರ್ಚಿಸಿ, ಯುಪಿಎಸ್ ಶಾಲೆ ಆವರಣದ ಕೊಠಡಿಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಯಿತು. ಅದರಂತೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರದ ಕಟ್ಟಡದಲ್ಲಿ ಸೋರಿಕೆಯಿಂದ ಸಮಸ್ಯೆ ಆಗುತ್ತಿದ್ದ ಎಲ್ಲ ಭೋದನಾ ವರ್ಗಗಳನ್ನು ಯುಪಿಎಸ್ ಶಾಲೆ ಕಟ್ಟಡದಲ್ಲಿ ಆರಂಭಿಸಲಾಯಿತು.

ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ ಜಿಲ್ಲಾಧಿಕಾರಿಗಳು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ, ಪ್ರತೀ ಬೋಧನಾ ಕೊಠಡಿಗೆ ತೆರಳಿ ವಿದ್ಯಾರ್ಥಿನಿಯರನ್ನು ಮಾತನಾಡಿಸಿದರು. ಭರವಸೆಯಂತೆ ಕಾಲಮಿತಿಯಲ್ಲಿ ಕಾರ್ಯ ಮಾಡಿದ ಡಿಸಿ ಅವರನ್ನು ವಿದ್ಯಾರ್ಥಿನಿಯರು ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ತಕ್ಕಂತೆ ಶ್ರಮ ಹಾಕಬೇಕು. ಓದುವ ಸ್ಥಳದಲ್ಲಿ ಬೆಳಕು, ಗಾಳಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಸರಕಾರಿ ಮಹಿಳಾ ಕಾಲೇಜು ನೂತನ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮವಹಿಸಲಾಗಿದೆ. ಉಸ್ತುವಾರಿ ಸಚಿವರ ಮತ್ತು ಸ್ಥಳೀಯ ಶಾಸಕರ ಮುತುವರ್ಜಿಯಿಂದ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದು, ಕೆಎಚ್‌ಬಿ ಅವರಿಗೂ ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ. ತ್ವರಿತವಾಗಿ ಕಾಮಗಾರಿ ಆರಂಭವಾಗುವಂತೆ ಸಮನ್ವಯ ಸಾಧಿಸಲು ಕಾಲೇಜು ಪ್ರಾಚಾರ್ಯರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಡಾ. ಎಸ್.ಎಸ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯುಪಿಎಸ್ ಶಾಲೆಯ ಮುಖ್ಯಾಧ್ಯಾಪಕಿ ನಾಯಕ, ಮಹಿಳಾ ಕಾಲೇಜು ಅಧ್ಯಾಪಕರು, ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಲೇಜು ಜೀವನವೆಂದರೆ, ವಿದ್ಯಾರ್ಥಿಗಳಲ್ಲಿ ಕನಸು ಕಾಣುವ ಕಾಲ. ಇದರೊಂದಿಗೆ ಸಾಧನೆ ಮಾಡುವ ಛಲ ಹೊಂದುವ ವಯಸ್ಸು. ಆದ್ದರಿಂದ ಮೊಬೈಲ್, ಗ್ಯಾಜೆಟ್‌ಗಳ ಮೊರೆ ಹೋಗದೆ, ಶ್ರಮಪಟ್ಟು ಓದಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 


Spread the love

LEAVE A REPLY

Please enter your comment!
Please enter your name here