ವಿಜಯಸಾಕ್ಷಿ ಸುದ್ದಿ, ನವದೆಹಲಿ:
ದೇಶದಾದ್ಯಂತ ಕೊರೊನಾ ರೂಪಾಂತರಿ ಡೆಲ್ಟಾ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ
ಜ.13 ರಂದು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಸಭೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ?, ರಾಜ್ಯಗಳಲ್ಲಿ ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳೇನು?, ರಾಜ್ಯದಲ್ಲಿನ ಪಾಸಿಟಿವಿಟಿ ರೇಟ್, ಡೆತ್ ರೇಟ್ ಹೇಗಿದೆ? ಸೋಂಕು ತಡೆಯಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಏನೇನು? ಹಾಗೂ ಕೋವಿಡ್ ಲಸಿಕೆ ಹೆಚ್ಚಿಸಲು ಏನು ಮಾಡಬೇಕು? ಎಂಬ ಬಗ್ಗೆ ಸಿಎಂಗಳ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಲ್ಲದೇ, ಅಂತರರಾಜ್ಯ ಸಾರಿಗೆ ಸಂಪರ್ಕ ವ್ಯವಸ್ಥೆ ದೃಷ್ಟಿಯಲ್ಲಿ ಏನು ಮಾಡಬೇಕು ಎಂಬ ವಿಷಯದ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.