ವಿಜಯಸಾಕ್ಷಿ ಸುದ್ದಿ, ಗದಗ:
ತಾನು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿ ಹಣ ಕದ್ದಿರುವ ಆರೋಪದಲ್ಲಿ ಪೇದೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಕರಿಗಾರ ಎಂಬಾತನ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಗ್ರಾಮೀಣ ಠಾಣೆಯಲ್ಲಿ ಡಿಸೆಂಬರ್ 1ರ ಬೆಳಗಿನ ಜಾವ ಕೇಸ್ ವರ್ಕರ್ ಅವರಿಗೆ ಸೇರಿದ ಕಪಾಟಿನಲ್ಲಿದ್ದ ಕೆ.ಪಿ. ಆ್ಯಕ್ಟ್ನಲ್ಲಿ ಅಂದರೆ ಜೂಜಾಟದಲ್ಲಿ ವಶಕ್ಕೆ ಪಡೆದಿದ್ದ ಸುಮಾರು 49 ಸಾವಿರ ಹಣವನ್ನು ಪೇದೆ ಮಂಜುನಾಥ್ ಕರಿಗಾರ ಎಂಬಾತನೇ ಕಳ್ಳತನ ಮಾಡಿರಬಹುದು ಎಂದು ಅದೇ ಠಾಣೆಯ ಸಿಬ್ಬಂದಿ ಶಹರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಪೊಲೀಸರು ಆರೋಪಿ ಮಂಜುನಾಥ್ ಕರಿಗಾರನನ್ನು ಇನ್ನೂ ವಶಕ್ಕೆ ಪಡೆದಿಲ್ಲ.
ಅನಾರೋಗ್ಯದ ನೆಪ: ಕಳೆದ ಆರು ದಿನಗಳಿಂದಲೂ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ನಾನಾ ಆಟಗಳನ್ನು ಆಡುತ್ತಿರುವ ಪೊಲೀಸ್ ಪೇದೆ ಮಂಜುನಾಥ್ ಇನ್ನೂ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಥೆ ಕಟ್ಟಿದ ಪೊಲೀಸರು!
ಪೊಲೀಸ್ ಮಂಜುನಾಥ್‌ನ ಕಳ್ಳತನದ ಪ್ರಕರಣ ತಿಳಿಯುತ್ತಿದ್ದಂತೆಯೇ ಜಿಮ್ಸ್ಗೆ ಮಾಹಿತಿ ಪಡೆಯಲು ತೆರಳಿದ್ದ ಮಾಧ್ಯಮದ ಸ್ನೇಹಿತರಿಗೆ ಗ್ರಾಮೀಣ ಠಾಣೆಯ ಪಿಎಸ್‌ಐ ಸಮೇತ ಕೆಲ ಪೊಲೀಸರು, ನೈಟ್ ಡ್ಯೂಟಿ ಮಾಡುವಾಗ ಶೌಚಾಲಯದಲ್ಲಿ ತಲೆ ತಿರುಗಿ ಬಿದ್ದಾನರೀ. ಸಿಪಿಐ ಸಾಹೇಬ್ರು ನೋಡಿ ಆಸ್ಪತ್ರೆಗೆ ಕಳುಹಿಸ್ಯಾರ ರೀ ಅಂತ ಕಥೆ ಕಟ್ಟಿದ್ದರು.
ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.