ವಿಜಯಸಾಕ್ಷಿ ಸುದ್ದಿ, ಡಂಬಳ
ಗ್ರಾಮದ ಐತಿಹಾಸಿಕ ಬೀಗರ ಬಾವಿ (ಕಲ್ಯಾಣಿ) ಸ್ವಚ್ಛತೆ ವೇಳೆ ಋಷಿಮುನಿಗಳ ಪಾದುಕೆ ಹಾಗೂ ರುದ್ರಾಕ್ಷಿಗಳು ದೊರೆತಿವೆ.
ಧರ್ಮಪುರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆಯಿಂದ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರವಿರುವ ಐತಿಹಾಸಿಕ ಬೀಗರ ಬಾವಿ(ಕಲ್ಯಾಣಿ)ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಏಳನೆ ದಿನವಾದ ಶನಿವಾರ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾಗ ಪಾದುಕೆಗಳು ಪತ್ತೆಯಾಗಿರುವುದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ.
ಕಲ್ಯಾಣಿಗಳ ಸ್ವಚ್ಛತೆಗೆ ಆಗ್ರಹ
ಐತಿಹಾಸಿಕ ಗ್ರಾಮವಾದ ಡಂಬಳ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣಿಗಳನ್ನು, ಪುರಾತನ ದೇವಾಲಯ ಹಾಗೂ ಮಸೀದಿಗಳನ್ನು ಸ್ಥಳೀಯ ಆಡಳಿತ ಮಂಡಳಿಯವರು, ಭಾರತೀಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಸಂರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಧರ್ಮಪುರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಮುದುಕೇಶ ತಳಗೇರಿ, ರಾಘವೇಂದ್ರ ಜಂಗಳಿ, ಗೋಪಾಲ ಅಡಿವಿಬೋವಿ, ಇಬ್ರಾಹಿಂ ಹೊಸಪೇಟೆ ಆಗ್ರಹಿಸಿದ್ದಾರೆ.