ಡಾ. ರಾಜ್ ಅವರ ಯೋಗಗುರು, ನಿವೃತ್ತ ಡಿಐಜಿ ನಿಧನ

0
Spread the love

ವಿಜಯಸಾಕ್ಷಿ ಸುದ್ದಿ, ಕುಂದಗೋಳ

Advertisement

ಕನ್ನಡದ ವರನಟ ಡಾ| ರಾಜ್‌ಕುಮಾರ ಅವರ ಮೆಚ್ಚಿನ ಯೋಗಗುರು, ಕೆಎಸ್‌ಆರ್‌ಪಿ ನಿವೃತ್ತ ಡಿ.ಐ.ಜಿ. ಡಾ| ಹೊನ್ನಪ್ಪ ಎಫ್. ನಾಯ್ಕರ (85) ಮೇ 20ರಂದು ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಡಾ| ಹೊನ್ನಪ್ಪ ಅವರು, ಐದು ದಶಕಗಳಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿದ್ದರು. ಕನಕಪುರ ರಸ್ತೆಯ ಬಿ.ಎಂ. ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ, ವರನಟ ಡಾ| ರಾಜ್‌ಕುಮಾರ ಸೇರಿದಂತೆ ಅನೇಕ ರಾಜಕಾರಣಿಗಳು, ನಟರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ “ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು.

ಆಸ್ಪತ್ರೆ ಸೇರುವ ವರೆಗೂ ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಹಠಯೋಗ ಪರಂಪರೆಯವರಾಗಿದ್ದ ಹೊನ್ನಪ್ಪ, ಅರ್ಥಪೂರ್ಣವಾದ ಯೋಗ, ತತ್ವಪದಗಳನ್ನು ರಚಿಸಿ, ಸ್ವತಃ ಹಾಡಬಲ್ಲವರಾಗಿದ್ದರು. ಅವರ ವಿದ್ಯಾಗುರುವಾಗಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ವಿ.ಕೃ. ಗೋಕಾಕರು ಮೆಚ್ಚುಗೆ ನುಡಿಗಳನ್ನಾಡಿದ್ದರು.

ಕರ್ನಾಟಕ ಸರ್ಕಾರವು 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2012ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು.


Spread the love

LEAVE A REPLY

Please enter your comment!
Please enter your name here