ವಿಜಯಸಾಕ್ಷಿ ಸುದ್ದಿ,ಉಡುಪಿ
ಡಿ.5 ರಂದು ಎಲ್ಲಾ ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತದೆ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ನ ಸ್ಪಷ್ಟ ಆದೇಶವಿದ್ದು, ಬಂದ್ ಮಾಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಡಿ.5 ರ ಕರ್ನಾಟಕ ಬಂದ್ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿ ಅವರೊಂದಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ.
ಇಷ್ಟರ ಮೇಲೆಯೂ ಬಂದ್ ಮಾಡಿದರೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಬೇಕಾಗಿರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೊಸ ವರ್ಷಾಚರಣೆಗೆ ತಡೆ ವಿಚಾರವಾಗಿ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಜನ ಸೇರದಂತೆ ನೋಡಿಕೊಳ್ಳಲು ತಜ್ಞರು ತಿಳಿಸಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.
ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಬದಲಾಗಿ ಹೊಸ ವರ್ಷಾಚರಣೆಯಲ್ಲಿ ಜನ ಸಂದಣಿಯಾಗದಂತೆ ನೋಡುವ ಜವಾಬ್ದಾರಿ ಇದೆ.
ನೈಟ್ ಕರ್ಪ್ಯೂ ಹೊರತಾಗಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ ಜಾಕೀರ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಜಾಕೀರ್ ಬಂಧನವಾಗಿದೆ.
ಇವತ್ತು ರಜೆ ಇರುವುದರಿಂದ ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಜಾಕೀರ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
ಮಾಜಿ ಶಾಸಕ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಕುರಿತು ಕೋಲಾರ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳ ಭೇಟಿ, ಟವರ್ ಡಂಪಿಂಗ್ ಮಾಡಿ ಸೇರಿದಂತೆ ಪ್ರತಿಯೊಂದರ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.