ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಾದರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ. ಇಡೀ ರಾಜ್ಯದಲ್ಲಿ ಇನ್ನೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಸನ್ನಿವೇಶದಲ್ಲಿಯೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತೋಟಿಗೆ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಆದರೂ ಜನ ಮಾತ್ರ ಅನಾವಶ್ಯಕವಾಗಿ ಓಡಾಡುತ್ತಿರುವುದನ್ನು ಮಾತ್ರ ಬಿಡುತ್ತಿಲ್ಲ.
ಕಠಿಣ ಲಾಕ್ ಡೌನ್ ಮಧ್ಯೆಯೂ ತಂದೆಯ ಬರ್ತಡೇ ಕೇಕ್ ತರುವುದಕ್ಕಾಗಿ ಇಬ್ಬರು ಯುವಕರು ವಿನಾಕಾರಣ ರಸ್ತೆಗೆ ಬಂದಿದ್ದರು. ಇದನ್ನು ಕಂಡ ಕೂಡಲೇ ಬೈಕ್ ತಡೆದ ಪೊಲೀಸರು, ಬೈಕ್ ವಶಕ್ಕೆ ಪಡೆದಿದ್ದಾರೆ.
ಈ ಕೇಕ್ ನಿಮಗೆ ಯಾರು ಕೊಟ್ಟರು ಹೇಳಿ ಎಂದು ಪೊಲೀಸರು ಪ್ರಶ್ನಿಸಿದಾಗ ಯುವಕರು, ಇಲ್ಲ ಸರ್ ಮನೆಯಲ್ಲಿಯೇ ತಯಾರಿಸಿದ್ದು, ನಾವು ಬೇಕರಿಯಲ್ಲಿ ತಂದಿಲ್ಲ. ಬೈಕ್ ಕೊಡಿ ಸರ್ ಇನ್ನೊಮ್ಮೆ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಗೋಳಾಡಿದರು. ಎಷ್ಟೇ ಗೋಳಾಡಿದರೂ ಪೊಲೀಸರು ಮಾತ್ರ ಬೈಕ್ ನೀಡಲಿಲ್ಲ.
ಈ ಘಟನೆ ನಗರದ ಹಳೇ ಡಿಸಿ ಕಚೇರಿ ಸರ್ಕಲ್ ಬಳಿ ನಡೆದಿದೆ. ಟ್ರಾಫಿಕ್ ಪೊಲೀಸರು ಬೈಕ್ ನ್ನು ತಡೆದು ಸೀಜ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಇದರ ಮಧ್ಯೆಯೂ ಹೊರಗೆ ಬರುತ್ತಿರುವವರ ಬೈಕ್ ಗಳನ್ನು ಸೀಜ್ ಮಾಡಲಾಗುತ್ತಿದೆ.