ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ತತ್ತಿ ಖಾತೆಯಲ್ಲಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಖಾತೆ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆಗೆ ತತ್ತಿ ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತ ಖಾತೆ ನೀಡಲಾಗಿದೆ.
ದೇವರ ಜಪ ಮಾಡಲಿ, ಗುಡಿಗಳನ್ನು ಚೆನ್ನಾಗಿ ನೋಡಿಕೊಂಡು ಪೂಜೆ ಮಾಡಿಸಲಿ ಎಂದು ಮುಜರಾಯಿ ಖಾತೆ ಕೊಟ್ಟಿದ್ದಾರೆ. ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವ ಚಿಂತೆ ಇತ್ತು. ಮುಂದೆ ಏನಾದರೂ ಅನಾಹುತ ಮಾಡಬಾರದು ಎಂದು ಮುಖ್ಯಮಂತ್ರಿ ಮುಜರಾಯಿ ಖಾತೆ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿಯವರು ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪಕ್ಷದಲ್ಲಿರುವವರೆಲ್ಲ ಸೇರಿ ಭ್ರಷ್ಟಾಚಾರ ಹಂಚಿಕೊಂಡಿರುತ್ತಾರೆ. ಹಾಗಾಗಿ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪದ ಕುರಿತಂತೆ ತನಿಖೆ ಮಾಡಿಲ್ಲ. ಯಾರಾದರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ತಡವಾದರೂ ತನಿಖೆ ಆಗುತ್ತದೆ. ಮರಳಿ ಶಶಿಕಲಾ ಅವರಿಗೆ ತತ್ತಿ ಖಾತೆ ನೀಡದಿರುವುದು ಸಂತೋಷ ತಂದಿದೆ ಎಂದರು.