ವಿಜಯಸಾಕ್ಷಿ ಸುದ್ದಿ, ಪಾಟ್ನಾ
ಸದ್ಯ ಇಡೀ ರಾಷ್ಟ್ರದಲ್ಲಿಯೇ ಮಹಾಮಾರಿಯ ಅಟ್ಟಹಾಸ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಸ್ಥಳೀಯ ಮಟ್ಟದಲ್ಲಿ ಲಾಕ್ ಡೌನ್ ಘೋಷಿಸಿ ಕೊರೊನಾ ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತಿವೆ. ಇದರೊಂದಿಗೆ ಹಲವರು ಹಲವಾರು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿಪಕ್ಷ ನಾಯಕ ಮಾತ್ರ ಸೇವೆಯಲ್ಲಿ ಜನರ ಮನ ಗೆದ್ದು ಮಾದರಿಯಾಗಿದ್ದಾರೆ.
ಪಾಟ್ನಾದ 1-ಪೊಲೊ ರಸ್ತೆಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಶಾಸಕರ ನಿಧಿಯಿಂದ ಪೂರ್ಣ ಪ್ರಮಾಣದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಬಿಹಾರ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಜನರ ಸೇವೆಗೆ ಮುಂದಾಗಿದ್ದಾರೆ.
ಬಿಹಾರ ರಾಜ್ಯದಲ್ಲಿ ಕೂಡ ಆಕ್ಸಿಜನ್ ಕೊರತೆ ತಾಂಡವವಾಡುತ್ತಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಈ ರೀತಿಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಸರ್ಕಾರಿ ನಿವಾಸದಲ್ಲಿರುವ ಬೆಡ್ ಗಳಿಗೆ ಆಕ್ಸಿಜನ್ ಅಳವಡಿಸಲಾಗಿದ್ದು, ಔಷಧಿಗಳ ಸಂಗ್ರಹ ಮಾಡಲಾಗಿದೆ. ಈ ಕೇಂದ್ರಕ್ಕೆ ತಮ್ಮ ಶಾಸಕರ ನಿಧಿಯಿಂದ ಬೆಡ್ ಮತ್ತು ಇತರ ಎಲ್ಲ ಸೌಲಭ್ಯಗಳನ್ನು ಹೊಂದಿಸಲಾಗಿದೆ. ಇದನ್ನು ಪ್ರತ್ಯೇಕ ವಾರ್ಡ್ ಅಥವಾ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಜವಾಬ್ದಾರಿಯುತ ಪ್ರತಿಪಕ್ಷವಾಗಿ, ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಯಾವುದೇ ವ್ಯವಸ್ಥೆಗಳನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.